ಬೆಂಗಳೂರು: ಬಿಜೆಪಿ ಸರ್ಕಾರಕ್ಕೆ ಜನರ ಆಶೀರ್ವಾದವಿಲ್ಲ. ಆಪರೇಷನ್ ಕಮಲವನ್ನು ದೇಶವ್ಯಾಪಿ ಜಾರಿಗೆ ತಂದವರು ಯಡಿಯೂರಪ್ಪನವರು. ಆಪರೇಶನ್ ಕಮಲದ ಜನಕ ಯಡಿಯೂರಪ್ಪ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಆಪರೇಷನ್ ಕಮಲ ಮೂಲಕ ಕಾಂಗ್ರೆಸ್ನ 14 ಹಾಗೂ ಜೆಡಿಎಸ್ನಿಂದ ಮೂವರು ಶಾಸಕರಿಂದ ರಾಜೀನಾಮೆ ಕೊಡಿಸಿದ್ದಾರೆ. ಆಪರೇಷನ್ ಕಮಲದಿಂದಾಗಿ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬಿದ್ದುಹೋಯಿತು. ಆದರೂ ಯಡಿಯೂರಪ್ಪನವರಿಗೆ ಬಹುಮತ ಇರಲಿಲ್ಲ. ಉಪಚುನಾವಣೆಯ ಬಳಿಕ ಬಿಜೆಪಿಗೆ ಬಹುಮತ ಬಂತು. ಇದು ಅನೈತಿಕ, ವಾಮಮಾರ್ಗದಿಂದ ಬಂದ ಸರ್ಕಾರ ಎಂದು ಕಿಡಿ ಕಾರಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಅಭಿವೃದ್ಧಿ ಆಗಿದೆಯಾ? ಇದನ್ನ ಮನಸಾಕ್ಷಿ ಮುಟ್ಟುಕೊಂಡು ಎಲ್ಲ ಶಾಸಕರು ಹೇಳಲಿ. ಸಮ್ಮಿಶ್ರ ಸರ್ಕಾರ, ಸಿದ್ದರಾಮಯ್ಯ ಸರ್ಕಾರ ಕೊಟ್ಟಂತಹ ಗ್ರಾಂಟ್ಸ್ ಅನ್ನು ವಾಪಾಸ್ ಪಡೆದರು. ಬಿಡುಗಡೆಯಾದ ಹಣವನ್ನು ಹಿಂದಕ್ಕೆ ತೆಗೆದುಕೊಂಡರು ಎಂದು ಆರೋಪಿಸಿದರು.
ಚರ್ಚೆಯ ವೇಳೆ ಡಿಜೆ ಹಳ್ಳಿ ಗಲಭೆ ವಿಚಾರ ಪ್ರಸ್ತಾಪಿಸಿದ ಅವರು, ಸೆಪ್ಟಂಬರ್ 11ರಂದು ಸಂಜೆ 5.47ಕ್ಕೆ ಫೇಸ್ಬುಕ್ನಲ್ಲಿ ಪ್ರವಾದಿಗಳ ಬಗ್ಗೆ ಒಂದು ವ್ಯಂಗ್ಯ ಚಿತ್ರವನ್ನು ಹಾಕಲಾಗುತ್ತದೆ. ಆ ಪೋಸ್ಟ್ ಮಾಡಿದ ಮೇಲೆ ಜನರಿಗೆ ಮೆಸೇಜ್ ಹೋಗುತ್ತದೆ. ಪೋಸ್ಟ್ ಮಾಡಿದವನ ಮೇಲೆ ಕ್ರಮಕ್ಕಾಗಿ ದೂರು ನೀಡಲಾಗುತ್ತದೆ. ಪೊಲೀಸರಿಗೆ ಒಂದು ತಂಡ ದೂರು ನೀಡುತ್ತದೆ. ಆದರೆ, ಪೊಲೀಸರು ದೂರು ದಾಖಲು ಮಾಡಲ್ಲ. ರಾತ್ರಿ 7.30ರಿಂದ 9ರವರೆಗೆ ಘರ್ಷಣೆ ಪ್ರಾರಂಭವಾಗುತ್ತದೆ ಎಂದು ಘಟನೆ ಹಿಂದಿನದರ ಬಗ್ಗೆ ವಿವರಿಸಿದರು.
ದೂರು ಕೊಟ್ಟ ತಕ್ಷಣವೇ ಆರೋಪಿ ನವೀನ್ ಅವರನ್ನು ಬಂಧಿಸಿದ್ದರೆ ಅಂತಹ ಘಟನೆ ನಡೆಯುವುದಕ್ಕೆ ಸಾಧ್ಯವಿರಲಿಲ್ಲ. ತಕ್ಷಣವೇ ಪೊಲೀಸರು ಯಾಕೆ ದೂರು ದಾಖಲಿಸಿಕೊಳ್ಳಲಿಲ್ಲ. ದೂರು ಕೊಡುವಾಗ ಇದ್ದದ್ದು 50 ಜನ ಮಾತ್ರ. ಪೊಲೀಸರು ಆಗ ದೂರು ದಾಖಲಿಸಲಿಲ್ಲವೇಕೆ? ನಾನು ಆ ಸ್ಥಳಕ್ಕೆ ಭೇಟಿ ನೀಡಿದ್ದೆ. ನಾನು ಎಲ್ಲರಿಂದಲೂ ಮಾಹಿತಿ ಪಡೆದಿದ್ದೇನೆ ಎಂದರು.
ಎಸ್ಡಿಪಿಐ ಪಕ್ಷ ತಪ್ಪು ಮಾಡಿದರೆ ಅವರನ್ನು ನಿಷೇಧಿಸಿ. ಚುನಾವಣಾ ಆಯೋಗಕ್ಕೆ ಪತ್ರ ಬರೆಯಿರಿ. ಆದರೆ, ಅದರ ಬಗ್ಗೆ ಬಿಜೆಪಿ ಏನೂ ಮಾತನಾಡಲ್ಲ. ಇದು ನಿಮ್ಮ ದ್ವಿಮುಖ ನೀತಿಯಲ್ಲವಾ? ಗಲಭೆ ಹೆಸರಲ್ಲಿ ರಾಜಕೀಯ ಲಾಭ ಪಡೆಯುತ್ತಿದ್ದೀರಿ. ನಿರಪಾರಾಧಿಗಳಿಗೆ ಶಿಕ್ಷೆಯಾಗಬಾರದು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಸರ್ಕಾರದ ವಿರುದ್ಧ ಜನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹರಿಹಾಯ್ದರು.
ಇದೇ ವೇಳೆ ಸಿಎಂ ಪುತ್ರ ವಿಜಯೇಂದ್ರ ಅವರ ಮೇಲಿನ ಭ್ರಷ್ಟಾಚಾರದ ಆರೋಪದ ಬಗ್ಗೆ ವಿಷಯ ಪ್ರಸ್ತಾಪಿಸಿದ ಮಾಜಿ ಸಿಎಂ ಅವರು, ಇಲ್ಲಿಯವರೆಗೆ ಎಲ್ಲಾ ವಾಟ್ಸ್ಆ್ಯಪ್ ಮೆಸೇಜ್ ಓದಿದ್ದೇನೆ. ದಾಖಲೆ ಇರುವುದರಿಂದ ಸತ್ಯಾಸತ್ಯತೆ ಗೊತ್ತಾಗಬೇಕು. ಸುಪ್ರೀಂಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆಯಾಗಬೇಕು ಅಥವಾ ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನಿಗಾದಲ್ಲಿ ಎಸ್ಐಟಿ ತನಿಖೆ ನಡೆಯಬೇಕು. ಆರೋಪ ಸಾಬೀತು ಆದರೆ ಯಡಿಯೂರಪ್ಪ ರಾಜೀನಾಮೆ ಕೊಡಲಿ. ನಾನು ಮಾಡಿದ ಆರೋಪ ನಿರಾಧಾರವಾದರೆ, ನಾನೂ ರಾಜೀನಾಮೆ ಕೊಡುತ್ತೇನೆ. ಇದು ನನ್ನ ಮತ್ತು ಅವರ ನಡುವಿನ ಜಂಟಲ್ ಮನ್ ಅಗ್ರಿಮೆಂಟ್ ಎಂದರು.
ಸರ್ಕಾರದ ಮೇಲೆ ನಂಬಿಕೆ ಇಲ್ಲ:
ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸರ್ಕಾರ ಕೋವಿಡ್ ನಿರ್ವಹಣೆ ಮಾಡಿದೆ ಎಂಬ ಬಗ್ಗೆ ನಮಗೆ ಯಾರಿಗೂ ವಿಶ್ವಾಸ ಇಲ್ಲ. ರಾಜ್ಯದ ರೈತರಿಗೆ, ಯುವಕರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಸರ್ಕಾರದ ಮೇಲೆ ವಿಶ್ವಾಸ ಇಲ್ಲ ಎಂದರು.
ಸಾರ್ವಜನಿಕ ಜೀವನದಲ್ಲಿ ಇರುವಾಗ ಆತ್ಮಸಾಕ್ಷಿ ಇರಬೇಕಲ್ಲವಾ? ಚಾಲಕರಿಗೆ, ಸವಿತಾ ಸಮಾಜದವರಿಗೆ, ಮಡಿವಾಳ ಸಮುದಾಯದವರಿಗೆ ಸರ್ಕಾರದ ಮೇಲೆ ನಂಬಿಕೆ ಬರಬೇಕಲ್ಲಾ? ನಾಡಿನ ಆರುವರೆ ಕೋಟಿ ಜನರಿಗೆ ಈ ಸರ್ಕಾರದ ಮೇಲೆ ವಿಶ್ವಾಸ ಇಲ್ಲ. 25 ಜನ ಸಂಸದರಿದ್ದಾರೆ. ಅವರಿಗೂ ಸರ್ಕಾರದ ಮೇಲೆ ನಂಬಿಕೆ ಇಲ್ಲ. ನಿಮ್ಮ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಮೇಲೂ ವಿಶ್ವಾಸ ಇಲ್ಲ ಎಂದು ಕಿಡಿ ಕಾರಿದರು.