ಬೆಂಗಳೂರು: ಬಿ. ಎಸ್. ಯಡಿಯೂರಪ್ಪನವರು ಸಿಎಂ ಆಗುತ್ತಾರೆ ಅಂದರೆ ಬರ ಹೋಗುತ್ತದೆ. ಅನಾವೃಷ್ಟಿ ಹೋಗಿ ಅತಿವೃಷ್ಟಿ ಬರುತ್ತದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ವಿಕಾಸಸೌಧದಲ್ಲಿ ತಮ್ಮ ಕಚೇರಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಅತಿವೃಷ್ಟಿಯಿಂದ ಒಂದು ವಾರದಲ್ಲಿ ಎಲ್ಲ ಡ್ಯಾಂಗಳೂ ತುಂಬಿವೆ. ಇದು ಯಡಿಯೂರಪ್ಪನವರ ಅದೃಷ್ಟ. ಅತಿವೃಷ್ಟಿ ಸಂಬಂಧ ಪರಿಹಾರ ಕ್ರಮಗಳನ್ನು ಜಾರಿ ಮಾಡುತ್ತೇವೆ ಎಂದು ವಿವರಿಸಿದರು.
ಮಧ್ಯಂತರ ಚುನಾವಣೆ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಅನುಭವಿ ರಾಜಕಾರಣಿ. ಅವರ ದೃಷ್ಟಿಕೋನ ಯಾವ ರೀತಿ ಇದೆಯೋ ಗೊತ್ತಿಲ್ಲ. ಸಿದ್ದರಾಮಯ್ಯ ತಮ್ಮ ಅನುಭವದಲ್ಲಿ ಮಧ್ಯಂತರ ಚುನಾವಣೆ ಬರುತ್ತದೆ ಅಂದಿದ್ದಾರೆ. ಆದರೆ ನನ್ನ ಅನುಭವದಲ್ಲಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮೂರು ವರ್ಷ ಒಂಭತ್ತು ತಿಂಗಳು ಅಧಿಕಾರ ನಡೆಸುತ್ತದೆ. ಬಳಿಕ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಬಿಜೆಪಿಯೇ ಗೆದ್ದು ಅಧಿಕಾರ ಹಿಡಿಯಲಿದೆ ಎಂದರು.
ವಿಕಾಸಸೌಧ ಕಚೇರಿ ಪೂಜೆ:
ವಿಕಾಸಸೌಧದಲ್ಲಿ ವಸತಿ ಸಚಿವ ವಿ. ಸೋಮಣ್ಣ ಕೊಠಡಿ ಸಂಖ್ಯೆ 143 ರಲ್ಲಿ ಕಚೇರಿ ಪೂಜೆ ಕೈಗೊಂಡರು. ಈ ವೇಳೆ ಸಚಿವ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್, ಶಾಸಕ ಶಿವನಗೌಡ ನಾಯಕ್ ಸೇರಿದಂತೆ, ಕಾರ್ಪೊರೇಟರ್ಗಳು, ಕ್ಷೇತ್ರದ ಬೆಂಬಲಿಗರು ಭಾಗಿಯಾಗಿದ್ದರು.