ಬೆಂಗಳೂರು: ಮುಖ್ಯಮಂತ್ರಿಗಳು 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಯಶಸ್ವಿನಿ ಯೋಜನೆಯನ್ನು ಪರಿಷ್ಕರಿಸಿ ಮರು ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನವೆಂಬರ್ 1ರಿಂದ ಸದಸ್ಯರ ನೋಂದಣಿ ಪ್ರಾರಂಭವಾಗಲಿದೆ.
ಈ ಕುರಿತು ಇಂದು ಸರ್ಕಾರಿ ಆದೇಶ ಹೊರಡಿಸಲಾಗಿದೆ. ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಸದಸ್ಯರಿಗೆ ನಾಲ್ಕು ಜನರ ಕುಟುಂಬಕ್ಕೆ ತಲಾ 500 ರೂ. ಹಾಗೂ ನಗರ ಪ್ರದೇಶದ ಸಹಕಾರಿಗಳಿಗೆ 1000 ರೂ. ವಂತಿಗೆ ನಿಗದಿಪಡಿಸಲಾಗಿದೆ. ನಾಲ್ಕು ಮಂದಿಗಿಂತ ಹೆಚ್ಚಿನ ಸದಸ್ಯರು ಇರುವ ಕುಟುಂಬ ಗಳಿಗೆ ಹೆಚ್ಚುವರಿ ಸದಸ್ಯರಿಗೆ ತಲಾ 200 ರೂ. ವಂತಿಗೆ ಪಾವತಿಸಿ, ನೊಂದಾಯಿಸಬಹುದು.
2022-23ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿಯವರು ಯಶಸ್ವಿನಿ ಯೋಜನೆಯನ್ನು ರಾಜ್ಯದಲ್ಲಿ ಮರು ಜಾರಿಗೊಳಿಸಲು ಘೋಷಿಸಿದ್ದರು. ಈ ಯೋಜನೆಯಡಿ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಒಂದು ಕುಟುಂಬಕ್ಕೆ 5 ಲಕ್ಷ ರೂ. ವರೆಗಿನ ವೆಚ್ಚದಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದು. ರಾಜ್ಯ ಸರ್ಕಾರವು ಇದಕ್ಕಾಗಿ ಪ್ರಸಕ್ತ ಆಯವ್ಯಯದಲ್ಲಿ 300 ಕೋಟಿ ರೂ. ಅನುದಾನ ನಿಗದಿಪಡಿಸಿದೆ.
ಈ ಹಿಂದೆ ಸಹಕಾರ ಇಲಾಖೆಯಲ್ಲಿ ಯಶಸ್ವಿನಿ ಯೋಜನೆಯನ್ನು 2003ರಲ್ಲಿ ಪ್ರಾರಂಭಿಸಿದ್ದು, 2003-04 ರಿಂದ 2017-18ರವರೆಗೆ ಜಾರಿಯಲ್ಲಿತ್ತು. ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾವಣೆಗೊಂಡಿದ್ದು, 2018, ಮೇ 31ರಿಂದ ಈ ಯೋಜನೆಯು ಸ್ಥಗಿತಗೊಂಡಿತ್ತು. 2018ರ ಜೂನ್ 1ರಿಂದ ಆರೋಗ್ಯ ಕರ್ನಾಟಕ ಯೋಜನೆಯೊಂದಿಗೆ ವಿಲೀನಗೊಂಡಿತ್ತು.
ಈ ಯೋಜನೆಯನ್ನು 'ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್' ಮೂಲಕ ಅನುಷ್ಠಾನಗೊಳಿಸಲಾಗುವುದು. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಹಕಾರ ಇಲಾಖೆ ಇವರು ಟ್ರಸ್ಟ್‌ನ ಅಧ್ಯಕ್ಷರಾಗಿರುತ್ತಾರೆ. 2022-23ನೇ ಸಾಲಿಗೆ ಸಂಬಂಧಿಸಿದಂತೆ ಯಶಸ್ವಿನಿ ಯೋಜನೆಯಡಿ ಸದಸ್ಯತ್ವ ನೋಂದಣಿ ಪ್ರಕ್ರಿಯೆ ನ. 01ರಿಂದ ಪ್ರಾರಂಭಿಸಲಾಗುತ್ತದೆ. ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗಿದೆ.
ಇದನ್ನೂ ಓದಿ: ಗ್ರಾಪಂಗೆ ವಿದ್ಯುತ್ ಬಿಲ್ ಹೊರೆ ತಪ್ಪಿಸಿದ ಸೋಲಾರ್.. ಸೌರಶಕ್ತಿಯಿಂದಲೇ 88 ಮನೆಗಳಿಗೆ ನೀರು ಪೂರೈಕೆ