ಬೆಂಗಳೂರು: ಯಮ ಯಾರಿಗೂ ಸಹ ಕರುಣೆ ತೋರುವುದಿಲ್ಲ, ಕೇಂದ್ರ ಸಚಿವ ಸುರೇಶ್ ಅಂಗಡಿ ಸಾವು ಅನ್ಯಾಯ. ಈ ಸಮಯದಲ್ಲಿ ದೇವರು ಬಹಳ ಕ್ರೂರಿ ಎಂದು ಭಾವಿಸುವಂತಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ನಡೆದ ಸಂತಾಪ ಸೂಚಕ ಚರ್ಚೆಯಲ್ಲಿ ಮಾತನಾಡಿದ ಅವರು, ನಿನ್ನೆ ರಾತ್ರಿ ನಮ್ಮ ಶಾಸಕರಿಗೆಲ್ಲ ಔತಣಕೂಟ ಆಯೋಜಿಸಿದ್ದೆ, 20 ವರ್ಷಗಳ ಹಿಂದೆ ಅದೇ ಜಾಗದಲ್ಲಿ ಒಂದು ಕಾರ್ಯಕ್ರಮ ನಡೆಸಿದಾಗ ಆಗಿನ ಸಹಕಾರಿ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಮುದ್ದೂರ್ ಅವರು ಆ ಕಾರ್ಯಕ್ರಮಕ್ಕೆ ಬಂದಿದ್ದರು. ಅವರು ಕಾರ್ಯಕ್ರಮ ಮುಗಿಸಿ ಮನೆಗೆ ಮರಳಿದ ನಂತರ ಕೆಲ ಹೊತ್ತಿನಲ್ಲೇ ಸಾವನ್ನಪಿದರು ಅಂತಾ ಸುದ್ದಿ ಬಂದಿತ್ತು.
ಅಂದಿನ ದಿನ ಮುದ್ದೂರ್ ಅವರು ಆ ಕಾರ್ಯಕ್ರಮದಲ್ಲಿ ನನಗೆ ಒಂದು ಮಾತು ಹೇಳಿದ್ದರು, ‘ಕ್ಷಣಂ ವಿತ್ತಂ, ಕ್ಷಣಂ ಚಿತ್ತಂ, ಕ್ಷಣಂ ಜೀವಿತಮೇವಚ ಯಮಸ್ಯ ಕರುಣಾ ನಾಸ್ತಿ, ತಸ್ಮಾತ್ ಜಾಗ್ರತ... ಜಾಗ್ರತ.’ ಈ ಮನಸ್ಸು, ಹಣ ಚಂಚಲ ಇದ್ದಂತೆ. ಅದೇ ರೀತಿ ಯಮ ಕೂಡ ನಾನು ಯಾರಿಗಾದರೂ ಸಹಾಯ ಮಾಡುತ್ತೇನೆ, ಮಕ್ಕಳ ಮದುವೆ ಮಾಡುತ್ತೇನೆ, ಕರುಣೆ ತೋರಿಸು ಎಂದರೆ ತೋರಿಸುವುದಿಲ್ಲವಂತೆ. ಅವನು ನಿರ್ಧರಿಸಿದರೆ ಯಾರನ್ನಾದರೂ ಮುಲಾಜಿಲ್ಲದೆ ಕರೆಸಿಕೊಳ್ಳುತ್ತಾನಂತೆ. ಅದೇ ರೀತಿ ಇಂದು ಸುರೇಶ ಅಂಗಡಿ ಅವರನ್ನು ಕರೆಸಿಕೊಂಡಿದ್ದಾನೆ. ಅವರು ಮಂತ್ರಿಯಾಗಿ ಕೇವಲ ಒಂದು ವರ್ಷವಾಗಿದೆ, ಅವರು ಮಂತ್ರಿಯಾಗಿದ್ದಾಗ ಅವರನ್ನು ಒಮ್ಮೆ ನಾನು ಭೇಟಿ ಮಾಡಿದ್ದೆ. ಆಗ ಅವರು ನನ್ನೊಡನೆ ಮಾತನಾಡುತ್ತಾ, ನಾನು ಮಂತ್ರಿ ಸ್ಥಾನ ನಿರೀಕ್ಷೆ ಮಾಡಿರಲಿಲ್ಲ, ಅವರೇ ನನಗೆ ಸ್ಥಾನ ಕೊಟ್ಟಿದ್ದಾರೆ. ನನಗೆ ಸಿಕ್ಕಿರುವ ಅವಕಾಶದಲ್ಲಿ ನನ್ನ ಕೈಲಾದ ಸಹಾಯವನ್ನು ರಾಜ್ಯಕ್ಕೆ ಮಾಡುತ್ತೇನೆ ಎಂದಿದ್ದರು. ಅವರು ಅಲ್ಪಾವಧಿಯಲ್ಲೇ ರಾಜ್ಯಕ್ಕೆ ಉತ್ತಮ ಯೋಜನೆ ತರುವ ಪ್ರಯತ್ನ ಮಾಡಿದ್ದಾರೆ ಆದರೆ ಅವರ ಬಗ್ಗೆ ಯಮ ಕರುಣೆ ತೋರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೊರೊನಾ ಬಗ್ಗೆ ಉಡಾಫೆ ಮಾಡುತ್ತಿದ್ದೆ:
ನಾನು ಈ ಕೊರೊನಾ ವಿಚಾರದಲ್ಲಿ ಸಾಕಷ್ಟು ಉಡಾಫೆ ಮಾಡುತ್ತಿದ್ದೆ, ನನಗೆ ಕೊರೊನಾ ಬಂದಮೇಲೆಯೇ ನನಗೆ ಈ ರೋಗದ ಬಗ್ಗೆ ಅರಿವಾಯಿತು. ಆಸ್ಪತ್ರೆಗೆ ಹೋಗಿ ಬಂದ ನಂತರ ಮತ್ತೆ ಜ್ವರ ಬಂತು, ತದನಂತರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ನಮ್ಮ ಶಾಸಕಾಂಗ ಪಕ್ಷದ ನಾಯಕರೂ ಕೂಡ ಎಚ್ಚರವಹಿಸುವಂತೆ ಹೇಳುತ್ತಿದ್ದರು. ನಾನು ಅವರ ಮಾತನ್ನು ನಿರ್ಲಕ್ಷಿಸುತ್ತಿದ್ದೆ ಎಂದು ಹೇಳಿದರು.
ನಮ್ಮ ರಾಜ್ಯದವರಾದ ಸುರೇಶ್ ಅಂಗಡಿ ಕೆಲದಿನಗಳ ಹಿಂದೆ ಚೆನ್ನಾಗಿದ್ದು, ದೆಹಲಿಗೆ ಹೋದ ಅವರು ಈಗ ಇಲ್ಲ ಎಂದರೆ ನಂಬಲು ಸಾಧ್ಯವಾಗಲಿಲ್ಲ. ನಿನ್ನೆ ಶಾಸಕರ ಔತಣ ಕೂಟದಲ್ಲಿ ಈ ವಿಚಾರ ಕೇಳಿದಾಗ ಯಾರಿಗೂ ಊಟ ಮಾಡುವ ಮನಸ್ಸು ಇರಲಿಲ್ಲ. ಅವರೊಬ್ಬ ಅಜಾತಶತ್ರು, ಅವರ ಅಗಲಿಕೆ ರಾಜ್ಯಕ್ಕೆ ಆದ ನಷ್ಟ ಹಾಗೂ ಅನ್ಯಾಯ, ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು.
ರೈತ ಕುಟುಂಬದಿಂದ ಬಂದು, ಶಿಕ್ಷಣ ಸಂಸ್ಥೆ ಕಟ್ಟಿ ರಾಜಕೀಯವಾಗಿ ಇಷ್ಟು ಎತ್ತರಕ್ಕೆ ಬೆಳೆದವರಿಗೆ ಈ ರೀತಿ ಆಗಿದೆ ಎಂದರೆ ನಿಜಕ್ಕೂ ನಂಬಲಾರದ ಸಂಗತಿ. ಸೌಮ್ಯ, ವಿನಯತೆಯಿಂದ ರಾಜಕೀಯ ಮಾಡಿಕೊಂಡು ಬಂದ ನಾಯಕನಿಗೆ ಭಗವಂತ ಈ ಶಿಕ್ಷೆ ಕೊಟ್ಟಿರುವುದನ್ನು ನೋಡಿದರೆ, ಭಗವಂತ ಎಷ್ಟು ಕ್ರೂರಿ ಯಾಕೆ? ಎಂದು ದೇವರ ಮೇಲೆ ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ಬಂದಂತೆ ಭಾಸವಾಗುತ್ತಿದೆ ಎಂದರು.
ಮನುಷ್ಯ ಹುಟ್ಟಿದ ಮೇಲೆ ಸಾಯಬೇಕು ನಿಜ, ಆದರೆ ಯಾವುದೇ ಅಭ್ಯಾಸ ಇಲ್ಲದೆ ಚೆನ್ನಾಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಸಾಯುತ್ತಾರೆ ಎಂದರೆ ನಿಜಕ್ಕೂ ದುರಾದೃಷ್ಟಕರ. ಅವರ ಕುಟುಂಬ ಸದಸ್ಯರಿಗೆ, ಅನುಯಾಯಿಗಳಿಗೆ ತೀವ್ರ ನೋವಾಗಿದ್ದು, ಅವರಿಗೆ ಈ ದುಖಃ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು.