ಬೆಂಗಳೂರು: ಸಿಲಿಕಾನ್ ಸಿಟಿ ವಿಶ್ವದಲ್ಲಿಯೇ ನಂಬರ್ ಒನ್ ವಾಹನ ದಟ್ಟಣೆ ಇರುವ ನಗರವೆಂದು ಸಮೀಕ್ಷೆ ಮೂಲಕ ತಿಳಿಯುತ್ತಿದ್ದಂತೆ, ಎಚ್ಚೆತ್ತಿರುವ ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಸಂಚಾರ ವಿಭಾಗದ ಹಿರಿಯ ಪೊಲೀಸರೊಂದಿಗೆ ಸಭೆ ನಡೆಸಿದ್ದಾರೆ.
ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಹಾಗೂ ಟ್ರಾಫಿಕ್ ಎಸಿಪಿಗಳೊಡನೆ ಇನ್ ಫೆಂಟ್ರಿ ರಸ್ತೆಯಲ್ಲಿರುವ ಕಮಿಷನರ್ ಕಚೇರಿಯಲ್ಲಿ ಸಭೆ ನಡೆಸಿದ್ರು.
ವಿಶ್ವದಲ್ಲೇ ಬೆಂಗಳೂರು ನಂಬರ್ ಒನ್ ಟ್ರಾಫಿಕ್ ಸಿಟಿ ಎಂಬ ಹೆಸರು ಪಡೆದಿದೆ. ಈ ಹೆಸರಿಗೆ ಪರೋಕ್ಷವಾಗಿ ಟ್ರಾಫಿಕ್ ಪೊಲೀಸರು ಕಾರಣರಾಗಿದ್ದಾರೆ. ಪೀಕ್ ಅವರ್ನಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸಲು ಪ್ರಯತ್ನಿಸಬೇಕು. ಈ ನಿಟ್ಟಿಯಲ್ಲಿ ಸರಿಯಾಗಿ ಸಂಚಾರಿ ಪೊಲೀಸರು ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಟಾಮ್ ಸಂಸ್ಥೆ ನೀಡಿರುವ ವರದಿಯನ್ನು ಒಪ್ಪಿಕೊಳ್ಳಬೇಕು. ಇವತ್ತು ಅಧಿಕಾರಿಗಳು ಮತ್ತು ಟಾಮ್ ಸಿಬ್ಬಂದಿ ಜೊತೆ ಸಭೆ ನಡೆಸಿದ್ದೇವೆ. ಬೆಂಗಳೂರಲ್ಲಿ ಅವರು ಸರ್ವೆ ಮಾಡಿರೋ ಕಡೆ ಮೆಟ್ರೋ ಮತ್ತು ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಇದೇ ಕಾರಣಕ್ಕೆ ಟ್ರಾಫಿಕ್ ಜಾಮ್ ಆಗುತ್ತಿದೆ. ಸಾಲದ್ದಕ್ಕೆ ನಗರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ತೃಪ್ತಿಕರವಾಗಿಲ್ಲ. ಅಲ್ಲದೇ ರಸ್ತೆಗಳು ಇಕ್ಕಟ್ಟಾಗಿವೆ. ದ್ವಿಚಕ್ರ ವಾಹನಗಳು 90ರಷ್ಟು ಬಳಕೆಯಾಗುತ್ತಿದೆ. ಈ ಕಾರಣಕ್ಕೆ ಟ್ರಾಫಿಕ್ ಸಮಸ್ಯೆ ಇದೆ ಎಂದು ಸಮರ್ಥಿಸಿಕೊಂಡರು.