ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ 2023ರ ಲೀಗ್ ಹಂತದ ಕೊನೆಯ ಪಂದ್ಯಕ್ಕೆ ಆತಿಥ್ಯ ವಹಿಸಿರುವ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಭಾರತ - ನೆದರ್ಲೆಂಡ್ಸ್ ಸೆಣಸಲಿವೆ. ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ಯಾತ್ರೆ ಮುಂದುವರಿಸಿರುವ ಭಾರತ ತಂಡ ಬೆಂಗಳೂರಿನಲ್ಲಿ ಕಣಕ್ಕಿಳಿಯುತ್ತಿರುವ ಏಕೈಕ ಪಂದ್ಯ ಇದಾಗಿದೆ. ಇದರಿಂದಾಗಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸುವ ಸಾಧ್ಯತೆಯಿದೆ. ಇನ್ನು ಪಂದ್ಯಕ್ಕೂ ಮೊದಲು ಸ್ಟೇಡಿಯಂ ಹೊರಭಾಗದಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸಿಡಿಸಿರುವ ಕೆಲ ಶತಕದ ಸಂಭ್ರಮಾಚರಣೆಯ ಕಟೌಟ್ಗಳನ್ನು ಅಳವಡಿಸಲಾಗಿದ್ದು, ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.
ಈಗಾಗಲೇ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜಮಾಯಿಸಲು ಆರಂಭಿಸಿರುವುದರಿಂದ ಪೊಲೀಸರು ಬಿಗಿ ಬಂದೋಬಸ್ತ್ ವಹಿಸಿದ್ದಾರೆ. ಸಂಪೂರ್ಣ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ವಹಿಸಲಾಗಿದೆ. ಟೂರ್ನಿಯಲ್ಲಿ ಭಾರತ ತಂಡ ಬೆಂಗಳೂರಿನಲ್ಲಿ ಕಣಕ್ಕಿಳಿಯುತ್ತಿರುವ ಏಕೈಕ ಪಂದ್ಯ ಇದಾಗಿರುವುದರಿಂದ, ಪಂದ್ಯ ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಕಾತರರಾಗಿದ್ದಾರೆ.
ಸುಗಮ ಸಂಚಾರಕ್ಕೆ ಸರಕು ಹಾಗೂ ಸಾಗಣೆ ವಾಹನಗಳಿಗೆ ನಿಷೇಧ : ಮತ್ತೊಂದೆಡೆ ಯಾವುದೇ ರೀತಿಯ ಸಂಚಾರ ದಟ್ಟಣೆ ಆಗದಂತೆ ಕ್ರಮವಹಿಸಲಾಗಿದೆ. ಕ್ಯಾಬ್ಗಳಿಗೆ ಪಿಕ್ ಅಪ್ ಅಂಡ್ ಡ್ರಾಪ್ ಸ್ಥಳಗಳನ್ನು ಗುರುತಿಸಲಾಗಿದೆ. ವಾರಾಂತ್ಯ ಆಗಿರುವುದರಿಂದ ಸಾರ್ವಜನಿಕರು ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಪ್ರಯಾಣಿಸುವುದನ್ನು ಸಾಧ್ಯವಾದಷ್ಡು ಕಡಿಮೆ ಮಾಡಿದರೆ ಉತ್ತಮ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.
ತವರು ಮೈದಾನದಲ್ಲಿ ಕನ್ನಡಿಗನಿಗೆ ಸಿಗುತ್ತಾ ಅವಕಾಶ?: ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹಾರ್ದಿಕ್ ಪಾಂಡ್ಯ ಹೊರ ಹೋಗಿರುವ ಹಿನ್ನೆಲೆಯಲ್ಲಿ ಟೀಂ ಇಂಡಿಯಾದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದಾರೆ. ಇಂದು ಬೆಂಗಳೂರಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಬೆಂಗಳೂರು ಮೂಲದ ಪ್ರಸಿದ್ಧ ಕೃಷ್ಣ ಕ್ರೀಡಾಂಗಣಕ್ಕೆ ಇಳಿಯುತ್ತಾರಾ ಎಂಬ ಕುತೂಹಲ ಮೂಡಿಸಿದೆ.
ತಂಡಗಳು ಇಂತಿವೆ: ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಪ್ರಸಿದ್ಧ್ ಕೃಷ್ಣ, ಸೂರ್ಯಕುಮಾರ್ ಯಾದವ್.
ಇದನ್ನೂ ಓದಿ : ಸೆಮೀಸ್ ರೇಸ್ನಿಂದ ಪಾಕ್ ಹೊರಕ್ಕೆ: ಭಾರತ vs ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ vs ಆಸ್ಟ್ರೇಲಿಯಾ ನಡುವೆ ಪಂದ್ಯ
ನೆದರ್ಲೆಂಡ್ಸ್: ಸ್ಕಾಟ್ ಎಡ್ವರ್ಡ್ಸ್ (ನಾಯಕ), ಮ್ಯಾಕ್ಸ್ ಒ'ಡೌಡ್, ಬಾಸ್ ಡಿ ಲೀಡ್, ವಿಕ್ರಮ್ ಸಿಂಗ್, ತೇಜ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಅಕರ್ಮನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ನೋಹ್ ಕ್ರೋಸ್, ವೆಸ್ಲಿ ಬ್ಯಾರೆಸಿ, ಸಾಕಿಬ್ ಜುಲ್ಫಿಕ್ , ಶರೀಜ್ ಅಹ್ಮದ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್
ಸ್ಥಳ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ
ಸಮಯ: ಮಧ್ಯಾಹ್ನ 2
ಇದನ್ನೂ ಓದಿ : ತಂಡದಲ್ಲಿ ಯಾರಿಗೂ ವಿಶ್ರಾಂತಿ ಇಲ್ಲ, ಅದೇ ತಂಡ ಮುಂದುವರೆಯಲಿದೆ: ಕೋಚ್ ದ್ರಾವಿಡ್