ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯ ಚುನಾವಣಾ ಆಯೋಗದಿಂದ ಇವಿಎಂ (ವಿದ್ಯುನ್ಮಾನ ಮತಯಂತ್ರ) ಹಾಗೂ ವಿವಿಪ್ಯಾಟ್ (ಮತದಾರರ ದೃಢೀಕರಣ ಪತ್ರ) ಕುರಿತು ಕಾರ್ಯಾಗಾರ ನಡೆಸಲಾಯಿತು. ರಾಜ್ಯದ ಪ್ರತಿಯೊಬ್ಬ ಮತದಾರನಿಗೂ ಇವಿಎಂ-ವಿವಿಪ್ಯಾಟ್ ಕುರಿತು ಪ್ರಾತ್ಯಕ್ಷಿಕೆ ನೀಡಿ, ಮತದಾರರ ವಿಶ್ವಾಸ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದರು.
ಖಾಸಗಿ ಹೋಟೆಲ್ನಲ್ಲಿ ಭಾರತೀಯ ಚುನಾವಣಾ ಆಯೋಗ ಆಯೋಜಿಸಿದ್ದ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಇವಿಎಂ ಮತ್ತು ವಿವಿ ಪ್ಯಾಟ್‌ಗಳ ಕುರಿತು ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 3.5 ಕೋಟಿ ಮತದಾರರಿಗೆ ಇವಿಎಂ-ವಿವಿಪ್ಯಾಟ್ ಕುರಿತು ಪ್ರಾತ್ಯಕ್ಷಿಕೆ ನೀಡಲಾಗಿತ್ತು. ಈ ಬಾರಿ ಬರೋಬ್ಬರಿ 2.3 ಕೋಟಿ ಮತದಾರರಿಗೆ ಪ್ರಾತ್ಯಕ್ಷಿಕೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ 5.6 ಕೋಟಿ ಮತದಾರರಿಗೆ ಪ್ರಾತ್ಯಕ್ಷಿಕೆ ನೀಡಿ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಮತಯಂತ್ರಗಳ ಬಗ್ಗೆ ಅನುಮಾನ ಬೇಡ:
ವಿದ್ಯುನ್ಮಾನ ಮತ ಯಂತ್ರದ ಬಗ್ಗೆ ಜನತೆ ನಾನಾ ರೀತಿ ಮಾತನಾಡುತ್ತ ಮತ ಯಂತ್ರಗಳನ್ನು ಅನುಮಾನ ದೃಷ್ಟಿಯಿಂದ ನೋಡಲಾಗುತ್ತಿದೆ. ಆದರೆ, ಮತ ಯಂತ್ರಗಳನ್ನು ಯಾವುದೇ ರೀತಿಯಲ್ಲಿಯೂ ಹ್ಯಾಕ್ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಇವಿಎಂ ಬಗ್ಗೆ ಆರೋಪ ಕೇಳಿ ಬಂದಿದೆ. ಆದರೆ, ಆರೋಪ ಸಾಬೀತು ಮಾಡುವುದಕ್ಕೆ ಸಾಧ್ಯವಾಗಿಲ್ಲ. ಉನ್ನತ ಮಟ್ಟದ ತಂತ್ರಜ್ಞರ ಸಮಿತಿ ಪರಿಶೀಲನೆ ಮಾಡಿ ಇವಿಎಂ ಮತ್ತು ವಿವಿ ಪ್ಯಾಟ್ಗಳನ್ನು ಸಿದ್ಧಪಡಿಸಿದೆ. ಯಾವುದೇ ರೀತಿಯಲ್ಲೂ ಹ್ಯಾಕ್, ಟ್ಯಾಪರಿಂಗ್ ಮಾಡುವುದಕ್ಕೆ ಸಾಧ್ಯವಿಲ್ಲ. ರಾಜಕೀಯ ಪಕ್ಷಗಳು ಸುಮ್ಮನೇ ಆರೋಪ ಮಾಡುವುದು ಸರಿಯಲ್ಲ ಎಂದರು.
ವಿವಿಪ್ಯಾಟ್ ಬಳಕೆಯಿಂದ ತಾನು ಯಾರಿಗೆ ಮತದಾನ ಮಾಡಿದ್ದೇನೆ ಎಂಬುದನ್ನು ಮತದಾರ ಮತದಾನ ಮಾಡಿದ ಕ್ಷಣದಲ್ಲಿ ವೀಕ್ಷಿಸಬಹುದಾಗಿದೆ. ಬ್ಯಾಲೆಟ್ ಯುನಿಟ್ನಲ್ಲಿ ಮತಗುಂಡಿ ಒತ್ತಿದ ನಂತರ ಮತದಾರ ತಾನು ಮತದಾನ ಮಾಡಿದ ವಿವರ ವಿವಿಪ್ಯಾಟ್ನಲ್ಲಿ 7 ಸೆಕೆಂಡ್ವರೆಗೆ ಪ್ರದರ್ಶನಗೊಳ್ಳಲಿದೆ ಎಂದು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಿದರು.
ಮತ ಚಲಾಯಿಸಿದ ಮತದಾರ ಮಾತ್ರ ವೀಕ್ಷಿಸಲು ಅವಕಾಶವಿರುತ್ತದೆ. ಇದರಿಂದ ಯಾವುದೇ ಗೊಂದಲ, ಸಮಸ್ಯೆ, ಅನುಮಾನ ಮತದಾರನಿಗೆ ಉಳಿಯುವುದಿಲ್ಲ. ತಾನು ಮತ ಚಲಾಯಿಸಿದ ವ್ಯಕ್ತಿ ಅಥವಾ ಚಿಹ್ನೆಗೆ ಮತದಾನವಾದ ಕುರಿತಂತೆ ಖಾತ್ರಿಪಡಿಸಿ ಮತಗಟ್ಟೆಯ ಕೊಠಡಿಯಿಂದ ತೆರಳಬಹುದಾಗಿದೆ ಎಂದು ಸಂಪೂರ್ಣ ಮಾಹಿತಿ ನೀಡಿದರು.
ಮತ ಯಂತ್ರಗಳಿಗೆ ಭದ್ರತೆ:
ಮತ ಯಂತ್ರಗಳನ್ನು ಅತ್ಯಂತ ಸುರಕ್ಷಿತ ಪೊಲೀಸ್ ಭದ್ರತೆ ಜತೆಗೆ ಜಿಪಿಎಸ್ ವ್ಯವಸ್ಥೆ ಇರುವ ವಾಹನದಲ್ಲಿ ಸಾಗಿಸಲಾಗುತ್ತದೆ. ಯಾವ ಯಂತ್ರ ಯಾವ ಲೋಕಸಭಾ ಕ್ಷೇತ್ರದ ಮತಗಟ್ಟೆಗೆ ತಲುಪುತ್ತದೆ ಎಂಬುದು ಮೊದಲೇ ನಿರ್ಧಾರವಾಗಿರುತ್ತದೆ. ಹಾಗಾಗಿ ಮತಯಂತ್ರ ಬದಲಾವಣೆ ಮತ್ತು ಬೇರೆ ಯಾವುದೇ ಚಟುವಟಿಕೆ ನಡೆಸುವುದಕ್ಕೆ ಅವಕಾಶವಿರುವುದಿಲ್ಲ ಎಂದು ಹೇಳಿದರು.