ಬೆಂಗಳೂರು: ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಮಹಿಳಾ ಕೆಲಸಗಾರರಿಗೆ ಸೂಕ್ತ ಸುರಕ್ಷತೆಯೊಂದಿಗೆ 24 ಗಂಟೆಗಳ ಕಾಲ ಕೆಲಸ ಮಾಡಲು ಮಹಿಳೆಯರಿಗೆ ಅವಕಾಶ ಕಲ್ಪಿಸುವ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಲಾಯಿತು. ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜಿ.ಟಿ.ಮಾಧುಸ್ವಾಮಿ ಅವರು ವಿಧೇಯಕ ಮಂಡಿಸಿ ಮಾತನಾಡಿ, ದುಡಿಮೆ ಮತ್ತು ಗಳಿಕೆಯಲ್ಲಿ ಸಮಾನತೆ ಅವಕಾಶ ಕಲ್ಪಿಸಿ ಅವಧಿ ಮೀರಿದ ಕೆಲಸಕ್ಕಾಗಿ ಮಹಿಳಾ ಕೆಲಸಗಾರರಿಗೆ ಅನುವು ಮಾಡಿಕೊಡುವ ಉದ್ದೇಶ ಹೊಂದಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಮಹಿಳಾ ಕೆಲಸಗಾರರಿಂದ ಲಿಖಿತ ಒಪ್ಪಿಗೆ ಪಡೆದು ಸುರಕ್ಷತೆ ಮತ್ತು ಆರೋಗ್ಯವನ್ನು ಭದ್ರಪಡಿಸಲು ಷರತ್ತುಗೊಳಪಟ್ಟು 24 ಗಂಟೆ ಕೆಲಸ ಮಾಡಲು ಮಹಿಳೆಯರನ್ನು ಸಶಕ್ತಗೊಳಿಸುವುದಕ್ಕಾಗಿ ಈ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ ಎಂದು ತಿಳಿಸಿದರು.
ಇನ್ನಷ್ಟು ಆರ್ಥಿಕ ಚಟುವಟಿಕೆಗಳು ಮತ್ತು ಉದ್ಯೋಗಾವಕಾಶಗಳನ್ನು ಸೃಜಿಸಲು ಯಾವುದೇ ವಾರದಲ್ಲಿ ಗರಿಷ್ಠ 48 ಗಂಟೆಗೊಳಪಟ್ಟು ಯಾವುದೇ ದಿನದಲ್ಲಿ ವಿರಾಮ ಮಧ್ಯಂತರಗಳನ್ನೊಳಗೊಂಡಿರುವುದು. ಪ್ರಸ್ತುತ ಕೆಲಸದ ಗಂಟೆಗಳ ಅವಧಿಯನ್ನು 9 ಗಂಟೆಯಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಅವಕಾಶ ಕಲ್ಪಿಸಿರುವುದು. ದೈನಂದಿನ ಗರಿಷ್ಠ ಕೆಲಸದ ಅವಧಿಯನ್ನು ಹೆಚ್ಚಿಸಲು ಕಾರ್ಖಾನೆಗಳ ಯಾವುದೇ ಗುಂಪು ಅಥವಾ ವರ್ಗ ವಿವರಣೆಗೆ ಕೆಲಸಗಾರನಿಗೆ ಒಟ್ಟು ಕೆಲಸದ ಗಂಟೆಗಳ ಅವಧಿಯನ್ನು ಮಧ್ಯಂತರವಿಲ್ಲದೆ 6 ಗಂಟೆಗಳ ವರೆಗೆ ವಿಸ್ತರಿಸಲು ರಾಜ್ಯಸರ್ಕಾರಕ್ಕೆ ಅವಕಾಶ ಕಲ್ಪಿಸುವುದಕ್ಕೆ ಯಾವುದೇ ವಾರದಲ್ಲಿನ ಅಥವಾ ಯಾವುದೇ ದಿನದಲ್ಲಿ ಕೆಲಸದ ಸಂದರ್ಭದಲ್ಲಿ ಸಾಮಾನ್ಯ ದರಕ್ಕಿಂತ ದುಪ್ಪಟ್ಟು ದರದಲ್ಲಿ ಮಜೂರಿಯನ್ನು ಕೆಲಸಗಾರನಿಗೆ ಪಾವತಿಸಬೇಕಾದ ಕೆಲಸದ ವೇಳೆಗಳನ್ನು ನಿಯಮಿಸಲು ಈ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾತ್ರಿ ಪಾಳೆಯದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಮಹಿಳಾ ಕೆಲಸಗಾರರಿಂದ ಲಿಖಿತ ಉತ್ತರ ಪಡೆದು ಸುರಕ್ಷತೆ ಮತ್ತು ಆರೋಗ್ಯ ಭದ್ರಪಡಿಸಿಕೊಂಡು ಷರತ್ತುನ್ವಯ 24 ಗಂಟೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ರಾತ್ರಿ ಪಾಳೆಯದಲ್ಲಿ ಮಹಿಳೆಯರು ಕೆಲಸ ಮಾಡಬೇಕೆಂಬ ನಿಯಮ ರೂಪಿಸದೆ ಆಸಕ್ತಿ ಇರುವವರಿಗೆ ಮಾತ್ರ ನೇಮಿಸಿಕೊಳ್ಳಬೇಕು. ವಾರದ ರಜೆ ಅಥವಾ ರಜೆಯ ಹೊರತು ಪಾಳೆಗಳಲ್ಲಿ ಯಾವುದೇ ಬದಲಾವಣೆ ಮಾಡಬಾರದು, ಮಹಿಳಾ ಉದ್ಯೋಗಿಗಳ ಮೊಬೈಲ್, ಇಮೇಲ್ ಐಡಿ ಅಥವಾ ವಿಳಾಸವನ್ನು ಯಾವುದೇ ಕಾರಣಕ್ಕೂ ಅನಧಿಕೃತ ವ್ಯಕ್ತಿಗಳಿಗೆ ಬಹಿರಂಗಗೊಳಿಸಬಾರದು ಎಂದು ವಿಧೇಯಕದಲ್ಲಿ ಸೂಚನೆ ನೀಡಲಾಗಿದೆ. ಮಹಿಳಾ ನೌಕರರನ್ನು ಕಾರ್ಖಾನೆಗೆ ಕರೆತರುವ ಪ್ರತಿಯೊಬ್ಬ ಚಾಲಕನ ವೈಯಕ್ತಿಕ ವಿವರಣೆ, ಚಾಲಕರ ಹಿಂದಿನ ಪೂರ್ವ ಇತಿಹಾಸವನ್ನು ಅಧ್ಯಯನ ಮಾಡಬೇಕು. ಹೀಗೆ ಹೊಸ ವಿಧೇಯಕದಲ್ಲಿ ಮಹಿಳೆಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ವಿಧೇಯಕವನ್ನು ಮಂಡಿಸಲಾಯಿತು.
ಬಿಬಿಎಂಪಿ ತಿದ್ದುಪಡಿ ವಿಧೇಯಕ ಮಂಡನೆ: ಶೈಕ್ಷಣಿಕ ಉದ್ದೇಶಗಳಿಗೆ ಸ್ಥಾಪಿಸಿದ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರದ ಮೂಲಕ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಿಗೆ ಸ್ವತ್ತು ತೆರಿಗೆ ಪಾವತಿಯಿಂದ ವಿನಾಯಿತಿ ನೀಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ತಿದ್ದುಪಡಿ) ವಿಧೇಯಕ 2023 ವಿಧೇಯಕವನ್ನು ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದರು.
ಶೈಕ್ಷಣಿಕ ಸಂಸ್ಥೆಗಳಿಗೆ ಸ್ವತ್ತು ತೆರಿಗೆ ವಿನಾಯಿತಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಶೈಕ್ಷಣಿಕ ಉದ್ದೇಶಗಳಿಗೆ ಸ್ಥಾಪನೆ ಮಾಡಿರುವ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರದ ಮೂಲಕ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಿಗೆ ಸ್ವತ್ತು ತೆರಿಗೆ ಪಾವತಿಯಿಂದ ವಿನಾಯ್ತಿಯನ್ನು ವಿಧೇಯಕದಲ್ಲಿ ನೀಡಲಾಗಿದೆ.ಸಾರ್ವಜನಿಕ ಆರಾಧನೆಗಾಗಿ ಪ್ರತ್ಯೇಕವಾಗಿಟ್ಟ ಮತ್ತು ವಾಸ್ತವವಾಗಿ ಬಳಸುತ್ತಿರುವ ಹಾಗೂ ಇತರೆ ಉದ್ದೇಶಗಳಿಗೆ ಬಳಸದೆ ಇರುವ ಸ್ಥಳಗಳಿಗೆ ವಿನಾಯ್ತಿ ಸಿಗಲಿದೆ. ನಿರಾಶ್ರಿತರು ಪ್ರಾಣಿಗಳಿಗೆ ಆಶ್ರಯ ಕೊಡುವ ಧರ್ಮ ಉದ್ದೇಶಕ್ಕಾಗಿ ಬಳಸುತ್ತಿರುವ ಸ್ಥಳಗಳು, ಅನಾಥಾಲಯಗಳು, ಕಿವುಡರು, ಮೂಕರಿಗಾಗಿ ಗೃಹಗಳು, ಶಾಲೆಗಳು, ವೃದ್ದರು, ಮಹಿಳೆಯರಿಗಾಗಿ ಇರುವ ಆಶ್ರಮಗಳು ಮತ್ತಿತರ ತೆರಿಗೆ ವಿನಾಯಿತಿಯನ್ನು ಕೊಡಲಾಗಿದೆ. ಅದೇ ರೀತಿ ಪ್ರಾಚೀನ ಐತಿಹಾಸಿಕ ಸ್ಮಾರಕಗಳು, ಪುರಾತತ್ವ ಸ್ಥಳಗಳು, ಧರ್ಮಾರ್ಥ ಆಸ್ಪತ್ರೆಗಳು, ಔಷಾಧಾಲಯಗಳು ಸ್ವತ್ತು ತೆರಿಗೆ ವಿನಾಯಿತಿ ಕೊಡಲಾಗಿದೆ.
ಇದನ್ನೂಓದಿ:ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಯಾರನ್ನೂ ತಡೆದಿಲ್ಲ: ಡಿ. ರೂಪಾ