ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ನೆತ್ತರು ಹರಿದಿದ್ದು, ಹಾಡಹಗಲೇ ಮಹಿಳೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಗಾಯತ್ರಿ ನಗರದಲ್ಲಿ ಇಂದು ಮಧ್ಯಾಹ್ನ ಮಂಜುಳಾ ಎಂಬುವರು ಕೊಲೆಯಾಗಿದ್ದಾರೆ. ಗಾಯತ್ರಿನಗರದ ಕಳೆದ ನಾಲ್ಕು ತಿಂಗಳಿಂದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಗೃಹಿಣಿ ಮಂಜುಳ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರಾದ ಮಂಜುಳಾ, ಚೀಟಿ ವ್ಯವಹಾರ ನಡೆಸುತ್ತಿದ್ದರು. ವ್ಯವಹಾರದಲ್ಲಿ ಹಣ ನಷ್ಟವಾಗಿತ್ತಂತೆ.ಅಲ್ಲದೇ ಗಂಡ ಸಹ ಕೌಟುಂಬಿಕ ಕಾರಣಕ್ಕಾಗಿ ಕಳೆದ ಒಂದು ವರ್ಷದಿಂದ ದೂರ ಉಳಿದಿದ್ದನಂತೆ.ಇಂದು ಅಪರಿಚಿತರು ಮನೆಗೆ ನುಗ್ಗಿ ಚಾಕುವಿನಿಂದ ಮಂಜುಳ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಡಿಸಿಪಿ ಶಶಿಕುಮಾರ್ ಪ್ರತಿಕ್ರಿಯಿಸಿದ್ದು, ಇಂದು ಮಧ್ಯಾಹ್ನ ಗಾಯತ್ರಿ ನಗರದಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಬಂದು ನೋಡಿದಾಗ ಮೃತಳ ದೇಹದ ಮೇಲೆ ಚಾಕುವಿನಿಂದ ಇರಿದ ಗುರುತು ಪತ್ತೆಯಾಗಿದೆ. ಮೃತ ಮಂಜುಳ ಮಗನ ಜೊತೆ ವಾಸವಿದ್ದು, ಚೀಟಿ ವ್ಯವಹಾರ ನಡೆಸುತ್ತಿದ್ದರು. ಚೀಟಿ ವ್ಯವಹಾರದಲ್ಲಿ ಸ್ವಲ್ಪ ಸಮಸ್ಯೆಯಾಗಿತ್ತು. ಸದ್ಯ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯ ಸುಳಿವು ಸಿಕ್ಕಿದೆ. ಆದಷ್ಟು ಬೇಗ ಆರೋಪಿಯನ್ನ ಬಂಧಿಸುತ್ತೇವೆ ಎಂದು ಡಿಸಿಪಿ ತಿಳಿಸಿದ್ದಾರೆ.