ಬೆಂಗಳೂರು: ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಯಾರಬ್ ನಗರದ ಮನೆಯೊಂದರಲ್ಲಿ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಸಂಬಂಧಿಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಯಾರಬ್ ನಗರದಲ್ಲಿ ನಾಲ್ಕು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹಿಳೆ ಅಫ್ರೀಂ ಖಾನ್ ಹತ್ಯೆಯಾದವರು. ಈಕೆಯ ಗಂಡ ಲಾಲು ಟಿಂಬರ್ ಯಾರ್ಡ್ನಲ್ಲಿ ಕೆಲಸ ಮಾಡುತ್ತಿದ್ದ. ದಂಪತಿಗೆ 8 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಹತ್ಯೆ ಸಂಬಂಧ ಗಂಡ ಲಾಲುನನ್ನು ವಶಕ್ಕೆ ಪಡೆದು ಬನಶಂಕರಿ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಗೊತ್ತಾಗಿದ್ದು ಹೇಗೆ?
ಕೌಟುಂಬಿಕ ಕಾರಣಗಳಿಂದ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಮಂಗಳವಾರ ಅಫ್ರೀಂ ತನ್ನ ತಾಯಿಗೆ ಕರೆ ಮಾಡಿ ಮಕ್ಕಳನ್ನು ಮನೆಗೆ ಕರೆದೊಯ್ಯುವಂತೆ ಹೇಳಿದ್ದಳು ಎನ್ನಲಾಗಿದೆ. ಇಂದು ಬೆಳಗ್ಗೆ ಬೀಗ ಹಾಕಿದ್ದ ಮನೆಯಲ್ಲಿ ಹೊಗೆ ಬರುತ್ತಿರುವುದನ್ನು ಕಂಡ ನೆರೆಹೊರೆಯವರು ಕೂಡಲೇ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಅಫ್ರೀಂ ಖಾನ್ ಪತಿ ಲಾಲುನನ್ನು ವಶಕ್ಕೆ ಪಡೆದಿದ್ದಾರೆ.
ಚಾಕು ಹಾಗೂ ಕತ್ತರಿಯಿಂದ ಮಹಿಳೆಯ ಎದೆ ಕೈ-ಕಾಲುಗಳ ಮೇಲೆ ಮನಬಂದಂತೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಬೆಡ್ ಶೀಟ್ಗೆ ಸಣ್ಣ ಮಟ್ಟದಲ್ಲಿ ಬೆಂಕಿ ತಗುಲಿದ್ದರಿಂದ ಹೊಗೆ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಮೊದಲಿಗೆ ಮಹಿಳೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಬಳಿಕ ಯಾರಿಗೂ ಅನುಮಾನ ಬಾರದಂತೆ ಹಾಸಿಗೆಗೆ ಬೆಂಕಿಯಿಡಲಾಗಿದೆ. ಪರಿಣಾಮ ಮನೆಯ ತುಂಬೆಲ್ಲಾ ಹೊಗೆ ದಟ್ಟವಾಗಿ ಆವರಿಸಿಕೊಂಡಿತ್ತು. ಅಲ್ಲದೆ ಮನೆಗೆ ಹೊರಗಡೆಯಿಂದ ಬೀಗ ಹಾಕಲಾಗಿತ್ತು. ಹೀಗಾಗಿ ಪತಿಯೇ ಕೊಲೆ ಮಾಡಿ ಮನೆಯ ಬೀಗ ಹಾಕಿಕೊಂಡು ಹೋಗಿದ್ದಾನಾ? ಅಥವಾ ಬೇರೆ ಯಾರಾದರೂ ಕೃತ್ಯ ಎಸಗಿ ಬಾಗಿಲು ಲಾಕ್ ಮಾಡಿಕೊಂಡು ಪರಾರಿಯಾಗಿದ್ದಾರಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ವಿಜಯಪುರ: ಕೆಟ್ಟು ನಿಂತ ಲಾರಿಗೆ ಕಾರು ಡಿಕ್ಕಿ; ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವು