ಬೆಂಗಳೂರು : ಕೆಲಸವಿಲ್ಲದೆ ಖಾಲಿ ಕುಳಿತ ಗಂಡನಿಗೆ ಪಾಠ ಕಲಿಸುವ ಸಲುವಾಗಿ ಕಳ್ಳತನದ ಕಥೆ ಕಟ್ಟಿದ್ದ ಹೆಂಡತಿಯೊಬ್ಬಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಚಿನ್ನವನ್ನು ಸ್ನೇಹಿತನಿಂದ ಕಳ್ಳತನ ಮಾಡಿಸಿ ನಾಟಕವಾಡಿದ್ದ ಈಕೆ ಬಳಿಕ ತಾನೇ ಕಳ್ಳತನವಾಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಆದರೆ ಪೊಲೀಸ್ ತನಿಖೆಯಲ್ಲಿ ಕಳ್ಳಾಟದ ಕಹಾನಿ ಬಯಲಾಗಿದೆ. ಆಕೆಗೆ ಸಾಥ್ ನೀಡಿದ್ದ ಸ್ನೇಹಿತ ಧನರಾಜ್ ಹಾಗೂ ರಾಕೇಶ್ ಎಂಬಾತನನ್ನು ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಲ್ಲೇಶ್ವರಂ ಠಾಣೆಗೆ ಬಂದಿದ್ದ ಮಹಿಳೆಯೊಬ್ಬಳು ತನ್ನ ಚಿನ್ನ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಯೊಬ್ಬ ಸ್ಕೂಟರ್ ತೆಗೆದುಕೊಂಡು ಹೋಗಿರುವುದು ಬೆಳಕಿಗೆ ಬಂದಿತ್ತು. ಆತನನ್ನು ಬಂಧಿಸಿ ಆತನ ಮೊಬೈಲ್ ಪರಿಶೀಲಿಸಿದಾಗ ದೂರುದಾರ ಮಹಿಳೆಯೊಂದಿಗೆ ಫೋನ್ನಲ್ಲಿ ಮಾತನಾಡಿರುವುದು ತಿಳಿದು ಬಂದಿತ್ತು. ಇಬ್ಬರನ್ನ ಪರಸ್ಪರ ಮುಖಾಮುಖಿ ವಿಚಾರಣೆ ಮಾಡಿದಾಗ ಕಳ್ಳತನದ ಸುಳ್ಳು ಸ್ಟೋರಿ ಬಯಲಾಗಿದೆ.
ಬ್ಯಾಂಕಿನಿಂದ 109 ಗ್ರಾಂ. ಚಿನ್ನ ಬಿಡಿಸಿಕೊಂಡು ಬಂದಿದ್ದ ಮಹಿಳೆ, ಅದನ್ನು ತನ್ನ ಸ್ಕೂಟರ್‌ನಲ್ಲಿಟ್ಟು ಒಂದೆಡೆ ನಿಲ್ಲಿಸಿದ್ದಳು. ಬಳಿಕ ಸ್ನೇಹಿತ ಧನರಾಜ್ಗೆ ಕರೆ ಮಾಡಿ ವಿಳಾಸ ತಿಳಿಸಿದ್ದಳು. ಅದರಂತೆ ಧನರಾಜ್ ಸ್ಕೂಟರ್ ತೆಗೆದುಕೊಂಡು ಹೋಗಿದ್ದಾನೆ. ವಿಚಾರಣೆ ಸಂದರ್ಭದಲ್ಲಿ ಕೆಲಸವಿಲ್ಲದೇ ಖಾಲಿ ಕುಳಿತಿದ್ದ ತನ್ನ ಗಂಡನಿಗೆ ಪಾಠ ಕಲಿಸಲು ಈ ರೀತಿ ಕೃತ್ಯ ಮಾಡಿಸಿರುವುದಾಗಿ ದೂರುದಾರಳೇ ಬಾಯ್ಬಿಟ್ಟಿದ್ದಾಳೆ. ಧನರಾಜ್ ಮತ್ತು ಆತನಿಗೆ ನೆರವು ನೀಡಿದ್ದ ರಾಕೇಶ್ ಎಂಬಾತನನ್ನು ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಸಿಸಿಬಿ ಭರ್ಜರಿ ಭೇಟೆ: ಐಷಾರಾಮಿ ಜೀವನಕ್ಕಾಗಿ ನಗರದಲ್ಲಿ ಸರಣಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಅಂತರರಾಜ್ಯ ಖದೀಮರನ್ನು ಸಿಸಿಬಿ ಪೊಲೀಸರು ಹೆಡೆಮುರಿ (ಡಿಸೆಂಬರ್- 27-2023) ಕಟ್ಟಿದ್ದರು. ಆಂಧ್ರ ಪ್ರದೇಶದ ಹಿಂದೂಪುರ ಮೂಲದ ಶೇಖ್ ಇಲಿಯಾಸ್ ಹಾಗೂ ಎರಕಲ ಕಾವಡಿ ನಾಗೇಂದ್ರ ಎಂಬುವರನ್ನು ಬಂಧಿಸಿ 35 ಲಕ್ಷ ಮೌಲ್ಯದ 650 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದರು. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಇದನ್ನೂ ಓದಿ: ಆಗ ಸ್ಯಾಂಡಲ್ವುಡ್ ಮೇಕಪ್ಮ್ಯಾನ್.. ಈಗ ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡುವ ಕಳ್ಳ!
ಇಬ್ಬರು ಆರೋಪಿಗಳ ವಿರುದ್ಧ ಗೌರಿಬಿದನೂರು, ತಾವರೆಕರೆ, ಮಧುಗಿರಿ, ಕೊರಟಗೆರೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಆರು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು. ಮೋಜಿನ ಜೀವನಕ್ಕಾಗಿ ಹಿಂದೂಪುರದಿಂದ ನಗರಕ್ಕೆ ಬಂದು ಇವರು ಕಳ್ಳತನ ಮಾಡುತ್ತಿದ್ದರು. ನಗರಕ್ಕೆ ಬಸ್ಗಳಲ್ಲಿ ಬಂದು ಕೃತ್ಯ ಎಸಗುತ್ತಿದ್ದರು. ಈ ಹಿಂದೆ ಕಳ್ಳತನ ಪ್ರಕರಣವೊಂದರಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು, ಜೈಲು ಪಾಲಾಗಿದ್ದರು. ಇತ್ತೀಚೆಗೆ ಜಾಮೀನು ಪಡೆದು ಹೊರಬಂದಿದ್ದ ಆರೋಪಿಗಳು ಮತ್ತೆ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು.
ಇದನ್ನೂ ಓದಿ: ಸಿಸಿಬಿ ಭರ್ಜರಿ ಬೇಟೆ.. ಇಬ್ಬರು ಅಂತಾರಾಜ್ಯ ಖದೀಮರಿಂದ 35 ಲಕ್ಷ ಮೌಲ್ಯದ ಚಿನ್ನಾಭರಣ ವಶ