ಕೆ.ಆರ್.ಪುರ: ಇಲ್ಲಿನ ಭಟ್ಟರಹಳ್ಳಿ ಕೆರೆಗೆ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಕುಡಿದ ಮತ್ತಿನಲ್ಲಿ ಕೆರೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಕಟ್ಟಡ ಕಾಮಗಾರಿ ಕೆಲಸ ಮಾಡುತ್ತ ಕಿತ್ತಗನೂರು ಬಳಿ ವಾಸವಾಗಿದ್ದ ಕಲಬುರಗಿ ಮೂಲದ ಅಕ್ಕಮ್ಮ ಎಂಬುವರೇ ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದ ಅಕ್ಕಮ್ಮ ಮದ್ಯ ಸೇವನೆ ಮಾಡುತ್ತಿದ್ದರು. ನಿತ್ಯ ಕುಡಿದು ರಸ್ತೆಯ ಮೇಲೆ ಮಲಗುತ್ತಿದ್ದಳು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಅಕ್ಕಮ್ಮನ ಗಂಡ ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಇವರ ಏಳು ವರ್ಷದ ಹೆಣ್ಣು ಮಗು ಅಪ್ಪ, ಅಮ್ಮನಿಲ್ಲದೇ ತಬ್ಬಲಿಯಾಗಿದೆ. ಭಟ್ಟರಹಳ್ಳಿ ಕೆರೆಗೆ ಫೆನ್ಸಿಂಗ್ ಹಾಕದೆ ಇರುವ ಕಾರಣ ಗುರುವಾರ ಕುಡಿದ ಗುಂಗಿನಲ್ಲಿ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಅನುಮಾನ ವ್ಯಕ್ತವಾಗಿದೆ. ಕಳೆದ ನಾಲ್ಕಾರು ವರ್ಷಗಳಿಂದ ಕೆರೆ ಕಾಮಗಾರಿ ಕುಂಟುತ್ತ ಸಾಗುತ್ತಿದ್ದು, ಫೆನ್ಸಿಂಗ್ ಅಳವಡಿಸಿಲ್ಲ.
ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಕೆ.ಆರ್.ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಲಸಿಕೆ ಪಡೆದರೂ ಹೆಮ್ಮಾರಿ Omicron ಅಟ್ಯಾಕ್: ಹೊಸ ತಳಿ ಎಷ್ಟು ಡೇಂಜರಸ್ ಗೊತ್ತಾ..?