ಬೆಂಗಳೂರು: ದೇವಸ್ಥಾನಗಳ ಜೀರ್ಣೋದ್ಧಾರ ಅನುದಾನ ಬಿಡುಗಡೆಗೆ ತಡೆಯೊಡ್ಡಿ ಹೊರಡಿಸಿದ್ದ ಆದೇಶವನ್ನು ಸರ್ಕಾರ ಇದೀಗ ಹಿಂದಕ್ಕೆ ಪಡೆದುಕೊಂಡಿದೆ. ಈ ಸಂಬಂಧ ಅನುದಾನ ತಡೆ ಹಿಡಿಯುವಂತೆ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿತ್ತು. ಸರ್ಕಾರದಿಂದ ಜಿಲ್ಲಾಡಳಿತಕ್ಕೆ ಒಳಪಡುವ ದೇವಾಲಯಗಳ ಅಭಿವೃದ್ಧಿ, ಜೀರ್ಣೋದ್ದಾರಕ್ಕಾಗಿ ಶೇ. 50 ರಷ್ಟು ಅಥವಾ ಭಾಗಶಃ ಅನುದಾನ ಮಂಜೂರಾಗಿರುವ ಅನುದಾನದಿಂದ ಕೈಗೊಂಡಿರುವ ಕಾಮಗಾರಿಗಳ ಮುಂದಿನ ನಿರ್ದೇಶನದವರೆಗೆ ಅನುದಾನ ಬಿಡುಗಡೆಗೆ ನಿರ್ಬಂಧ ಹೇರಿ ಆದೇಶಿಸಲಾಗಿತ್ತು. ಆ.14ಕ್ಕೆ ಮುಜರಾಯಿ ಇಲಾಖೆ ಈ ಆದೇಶ ಹೊರಡಿಸಿತ್ತು. ಇಂದು ಆ ಆದೇಶವನ್ನು ಸರ್ಕಾರ ಹಿಂಪಡೆದಿದೆ.
ಅನುದಾನ ತಡೆಹಿಡಿಯುವ ಆದೇಶ ವಿವಾದ ಸ್ವರೂಪ ಪಡೆಯುವುದನ್ನು ಮನಗಂಡು ಸರ್ಕಾರ ಆ ಆದೇಶವನ್ನು ಹಿಂಪಡೆದಿದೆ. ಅನುದಾನ ತಡೆಹಿಡಿಯುವ ಆದೇಶ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇತ್ತು. ಜೊತೆಗೆ ಪ್ರತಿಪಕ್ಷ ಅದರಲ್ಲೂ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಿಂದೂ ವಿರೋಧಿ ಎಂಬ ಆರೋಪಕ್ಕೊಳಗಾಗುವ ಹಿನ್ನೆಲೆ ಸರ್ಕಾರ ಆ ಆದೇಶವನ್ನು ತಕ್ಷಣ ವಾಪಸು ಪಡೆದಿದೆ ಎಂದು ತಿಳಿದು ಬಂದಿದೆ.
ಈ ಆದೇಶ ರಾಜಕೀಯ ಸ್ವರೂಪ ಪಡೆದು, ಕಾಂಗ್ರೆಸ್ ಸರ್ಕಾರಕ್ಕೆ ಡ್ಯಾಮೇಜ್ ಆಗುವ ಸಾಧ್ಯತೆ ಇತ್ತು. ಇದನ್ನು ಮನಗಂಡ ಸರ್ಕಾರ ಇದೀಗ ಆದೇಶವನ್ನು ವಾಪಸು ಪಡೆದು, ಡ್ಯಾಮೇಜ್ ಕಂಟ್ರೋಲ್ ಮಾಡಿದೆ.
ಏನಿದು ಅನುದಾನ ತಡೆಯ ಆದೇಶ?: ಸರ್ಕಾರದಿಂದ ದೇವಾಲಯಗಳ ಅಭಿವೃದ್ಧಿ ಜೀರ್ಣೋದ್ದಾರಕ್ಕಾಗಿ ಸಾಮಾನ್ಯ ಯೋಜನೆಯಡಿ ಅನುದಾನ ಮಂಜೂರಾಗಿದ್ದು, ಕಾಮಗಾರಿಗಳನ್ನು ಪ್ರಾರಂಭಿಸದೆ ಇರುವ ಸಂಸ್ಥೆಗಳಿಗೆ ಮುಂದಿನ ನಿರ್ದೇಶನದವರೆಗೆ ಹಣ ಬಿಡುಗಡೆ ಮಾಡದಂತೆ ಆದೇಶಿಸಲಾಗಿತ್ತು.
2022-23ನೇ ಸಾಲಿನಲ್ಲಿ ಸಾಮಾನ್ಯ ಯೋಜನೆಯಡಿ ಮಂಜೂರಾಗಿರುವ ಅನುದಾನದ ಪೈಕಿ ಈಗಾಗಲೇ ಶೇ.50 ತಮ್ಮ ಹಣ ಬಿಡಗಡೆಯಾಗಿ, ಆಡಳಿತಾತ್ಮಕ ಮಂಜೂರಾತಿ ನೀಡಿದ್ರು, ಹಣ ಬಿಡುಗಡೆ ಮಾಡದಿದ್ದಲ್ಲಿ ಅಂಥ ಕಾಮಗಾರಿಗೆ ಹಣವನ್ನು ಬಿಡುಗಡೆ ಮಾಡಬಾರದು ಹಾಗೂ ಕಾಮಗಾರಿಯನ್ನು ಪ್ರಾರಂಭಿಸದೇ ಇದ್ದಲ್ಲಿ ಕಾಮಗಾರಿಯನ್ನು ಪ್ರಾರಂಭಿಸದಂತೆ ನಿರ್ದೇಶನ ನೀಡಲಾಗಿತ್ತು.
ಆಡಳಿತಾತ್ಮಕ ಮಂಜೂರಾತಿಗೆ ಪ್ರಸ್ತಾವನೆ ಸ್ವೀಕೃತವಾಗಿದ್ದಲ್ಲಿ, ಆಡಳಿತಾತ್ಮಕ ಮಂಜೂರಾತಿಯನ್ನು ಮುಂದಿನ ನಿರ್ದೇಶನದವರೆಗೆ ತಡೆಹಿಡಿಯುವಂತೆ ತಿಳಿಸಲಾಗಿದೆ. ಈ ಮೂರು ನಿರ್ದೇಶನಗಳನ್ನು ಜಿಲ್ಲಾಧಿಕಾರಿಗಳಿಗೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ನೀಡಿದ್ದಾರೆ. ಆ ಮೂಲಕ 2022-23 ಸಾಲಿನಲ್ಲಿ ದೇವಾಲಯಗಳ ಅಭಿವೃದ್ಧಿ ಜೀರ್ಣೋದ್ದಾರಕ್ಕಾಗಿ ಸರ್ಕಾರದಿಂದ ಮಂಜೂರಾಗಿರುವ ಅನುದಾನದಿಂದ ಕೈಗೊಂಡಿರುವ ಕಾಮಗಾರಿಗಳ ಪ್ರಗತಿಯ ವರದಿಯ ಮಾಹಿತಿ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು.
ಇದನ್ನೂ ಓದಿ: ಬಿಜೆಪಿ ಸರ್ಕಾರದ ಅವಧಿಯ 40ರಷ್ಟು ಕಮಿಷನ್ ಪ್ರಕರಣ: ತನಿಖೆಗೆ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ರಚನೆ