ಮೈಸೂರು /ಬೆಂಗಳೂರು: ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಸಾಂಸ್ಕೃತಿಕ ರಾಜಧಾನಿಯಲ್ಲಿ ವಿಮಾನ ನಿಲ್ದಾಣ ಮೊದಲ ಹಂತದ ವಿಸ್ತರಣೆಗಾಗಿ ಭೂಮಿ ಹಸ್ತಾಂತರ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಮಧ್ಯ ಪ್ರವೇಶಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದ್ದಾರೆ.
ಕಾವೇರಿ ನಿವಾಸದಲ್ಲಿ ಇಂದು ಸಿಎಂ ಅವರಿಗೆ ಸಂಸದರು ಮನವಿ ಸಲ್ಲಿಸಿ, ಮೈಸೂರು ಕ್ಷೇತ್ರದಲ್ಲಿ ಆಗಬೇಕಾಗಿರುವ ಅಭಿವೃವೃದ್ಧಿ ಯೋಜನೆಗಳು ಹಾಗೂ ಇತರೆ ವಿಷಯಗಳ ಬಗ್ಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದರು. ಮೈಸೂರಿಗೆ ದೇಶ-ವಿದೇಶದ ಪ್ರಯಾಣಿಕರು ಆಗಮಿಸುತ್ತಿದ್ದು, ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಿವೆ. ಈ ಹಿನ್ನೆಲೆ ಪ್ರಯಾಣಿಕರಿಗೆ, ಉದ್ಯಮಿಗಳಿಗೆ, ಅನುಕೂಲವಾಗಲು ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಮಾಡಬೇಕಾದ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ 46 ಎಕರೆ ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಲು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಭೂ ಸ್ವಾಧೀನಕ್ಕೆ ವಿಶೇಷ ಜಿಲ್ಲಾಧಿಕಾರಿಗಳ ಒಪ್ಪಿಗೆ ದೊರೆತಿದೆ. ಭೂ ಮಾಲೀಕರಿಗೆ ವೆಚ್ಚ ಪಾವತಿಸಿದ ನಂತರ ಹಸ್ತಾಂತರ ಪ್ರಕ್ರಿಯೆ ಸರಾಗವಾಗಲಿದೆ. ಭೂಮಿ ಹಸ್ತಾಂತರ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಗೆ ಅಡ್ಡಿಯಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರು ಮಧ್ಯ ಪ್ರವೇಶಿಸಿ ತ್ವರಿತ ಗತಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಯದುವೀರ್ ಮನವಿ ಸಲ್ಲಿಸಿದರು.
ಕಾಲುವೆ, ವಿದ್ಯುತ್ ತಂತಿಗೆ ಪರ್ಯಾಯ ವ್ಯವಸ್ಥೆ ಮಾಡಲು ಮನವಿ ಉದ್ದೇಶಿತ ವಿಮಾನ ನಿಲ್ದಾಣದಲ್ಲಿ, ನೀರಾವರಿ ಕಾಲುವೆ, ಓವರ್ ಹೆಡ್ ವಿದ್ಯುತ್ ತಂತಿಗಳಿವೆ. ಇವುಗಳನ್ನು ಕೂಡ ರಾಜ್ಯ ಸರ್ಕಾರ ತೆರವುಗೊಳಿಸಬೇಕು ಅಥವಾ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ವಿವರಿಸಿದರು.
ದೇವರಾಜ ಮಾರುಕಟ್ಟೆ ಸಂರಕ್ಷಿಸಲು ಮನವಿ : ದೇವರಾಜ ಮಾರುಕಟ್ಟೆ ಕಟ್ಟಡ ಮತ್ತು ಲ್ಯಾಂಡ್ಸ್ ಡೌನ್ ಕಟ್ಟಡಗಳು ಪಾರಂಪರಿಕ ಕಟ್ಟಡಗಳಾಗಿವೆ. ಮೈಸೂರಿಗೆ ಇವು ಕಳಶಪ್ರಾಯವಾಗಿವೆ. ಇವುಗಳನ್ನು ಕೆಡವದೇ ಉಳಿಸಿಕೊಂಡು ಸಂರಕ್ಷಿಸಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಸಿಎಂಗೆ ಸಂಸದ ಯದುವೀರ್ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಮೈಸೂರಿನಲ್ಲಿ ಉದ್ದೇಶಿತ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA)ಗೆ ಭೂಸ್ವಾಧೀನ ಪ್ರಕ್ರಿಯೆ ಭಾರಿ ವಿಳಂಬವಾಗಿದೆ. ಈ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಬೇಕು. ಜಾಗತಿಕ ಮಟ್ಟದಲ್ಲಿ ಮೈಸೂರು ಖ್ಯಾತಿಯನ್ನು ಪಸರಿಸಲು ವಿಶ್ವದರ್ಜೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ. ಇದರಿಂದ ಮೈಸೂರಿನಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಾಗಲಿದೆ. ರಾಜ್ಯದ ಆರ್ಥಿಕತೆಗೂ ನೆರವಾಗಲಿದೆ ಎಂದರು.
ಸಂಸದರು ನೀಡಿರುವ ಮನವಿಗೆ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ, ಮೈಸೂರು ವಿಮಾನ ನಿಲ್ದಾಣ ಹಾಗೂ ಕ್ರಿಕೆಟ್ ಮೈದಾನಕ್ಕೆ ಸಂಬಂಧಿಸಿದ ಭೂಮಿ ಹಸ್ತಾಂತರ ವಿಷಯದಲ್ಲಿ ಸೂಕ್ತ ಕ್ರಮವನ್ನು ಶೀಘ್ರದಲ್ಲಿಯೇ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ಚಾಮರಾಜನಗರ: 3ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು
ಮೈಸೂರಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಹಾಗೂ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿದ್ದೇನೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ಕಾವೇರಿ ನಿವಾಸದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಂತರ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈಸೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಕುರಿತು ಕ್ರಿಕೆಟ್ ಅಸೋಸಿಯೇಷನ್ ಎಲ್ಲ ಸಿದ್ಧತೆ ಮಾಡುತ್ತಿದ್ದಾರೆ. ಕ್ರಿಕೆಟ್ ಸ್ಟೇಡಿಯಂಗೆ ಜಮೀನು ಸ್ವಾಧೀನದ ಬಗ್ಗೆ ಸಮಸ್ಯೆ ಇದೆ. ಇದರ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕೆಂದು ಮನವಿ ಮಾಡಿರುವುದಾಗಿ ತಿಳಿಸಿದರು. ಇನ್ನೂ ನೀರಾವರಿ ಯೋಜನೆ ಹಾಗೂ ಕೆಪಿಟಿಸಿಎಲ್ ಲೈನ್ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ ಎಂದರು.
ಮೈಸೂರಿನಲ್ಲಿ ಸಿದ್ದರಾಮಯ್ಯ ಮಾರ್ಗ ರಸ್ತೆ ಪ್ರಸ್ತಾವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಿನ್ಸೆಸ್ ರಸ್ತೆ ಬಗ್ಗೆ ನಮ್ಮ ನಿಲುವು ಸ್ಪಷ್ಟ ಇದೆ. ಪ್ರಿನ್ಸೆಸ್ ರಸ್ತೆಗೆ ಪುನರ್ ನಾಮಕರಣ ಮಾಡಲು ಕೆಲವರು ಮುಂದಾಗಿದ್ದಾರೆ. ಇದನ್ನು ನಾವು ಖಂಡಿಸಿದ್ದೇವೆ. ಮಹಾರಾಜರು ತಮ್ಮ ತಂಗಿ ಕೃಷ್ಣರಾಜಮ್ಮಣಿ ನೆನಪಿನಲ್ಲಿ ಆ ರಸ್ತೆಗೆ ಪ್ರಿನ್ಸೆಸ್ ರಸ್ತೆ ಅಂತ ನಾಮಕರಣ ಮಾಡಿದ್ದಾರೆ. ಅವರಿಗೆ ಟಿಬಿ ಬಂದಿತ್ತು, ಹೀಗಾಗಿ ಅಲ್ಲಿ ಟಿಬಿ ಸ್ಯಾನಿಟೋರಿಯಂ ಕೂಡಾ ಮಹಾರಾಜರು ಮಾಡಿದ್ದಾರೆ. ಆ ರಸ್ತೆಗೆ ಪ್ರಿನ್ಸೆಸ್ ರಸ್ತೆ ಅನ್ನುವ ಮೂಲ ಹೆಸರೇ ಇರಲೆಂದು ಸ್ಥಳೀಯ ಆಡಳಿತಕ್ಕೆ ಒತ್ತಾಯಿಸಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಪ್ರತಿಭಟನೆ ಮುಂದುವರೆಯಲಿದೆ. ಇದರ ಬಗ್ಗೆ ಸಿಎಂ ಜತೆ ಇಂದು ಚರ್ಚೆ ಮಾಡಲಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಕೆಎಸ್ಆರ್ಟಿಸಿ ಸಿಬ್ಬಂದಿಗೆ ಗುಡ್ ನ್ಯೂಸ್: ನಗದು ರಹಿತ ವೈದ್ಯಕೀಯ ಚಿಕಿತ್ಸೆ ಯೋಜನೆಗೆ ಸಿಎಂ ಚಾಲನೆ