ಬೆಂಗಳೂರು: ಒಂದು ಕಾಲದಲ್ಲಿ ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ, ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣೀಭೂತರಾಗಿದ್ದ ಮಾಜಿ ಸಚಿವ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಿದ್ದು, ಇದರ ವ್ಯತಿರಿಕ್ತ ಪರಿಣಾಮ ಆಡಳಿತ ಪಕ್ಷ ಬಿಜೆಪಿ ಮೇಲೆ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಹೊಸ ಪ್ರಾದೇಶಿಕ ಪಕ್ಷದ ಘೋಷಣೆ ಮಾಡುವಾಗ ಜನಾರ್ದನ ರೆಡ್ಡಿ ಅವರು ಭಾರತೀಯ ಜನತಾ ಪಕ್ಷದ ವಿರುದ್ಧ ನೇರವಾಗಿಯೇ ಕಿಡಿಕಾರಿದ್ದು, ತಮ್ಮನ್ನು ನಡೆಸಿಕೊಂಡ ರೀತಿ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮುಖಂಡರು ತಮ್ಮನ್ನು ಸರಿಯಾಗಿ ಬಳಸಿಕೊಳ್ಳದಿರುವ ಕುರಿತು ಅಸಮಾಧಾನ ಹೊರಹಾಕಿರುವುದನ್ನು ಗಮನಿಸಿದರೆ ಬಿಜೆಪಿ ವಿರುದ್ಧವೇ ಪ್ರಾದೇಶಿಕ ಪಕ್ಷವನ್ನು ಕಟ್ಟಿದಂತೆ ಮೇಲ್ನೋಟಕ್ಕೆ ಭಾಸವಾಗುತ್ತಿದೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ಪ್ರಾದೇಶಿಕ ಪಕ್ಷ ಕಟ್ಟುವ ಮೂಲಕ ಬಿಜೆಪಿಗೆ ಪಂಥಾಹ್ವಾನ ನೀಡಿದ್ದಾರಾ..? ಅಥವಾ ಬಿಜೆಪಿಗೆ ಇದರಿಂದ ಲಾಭವಾಗಲಿದೆಯಾ ...? ಎನ್ನುವುದನ್ನು ಖಚಿತವಾಗಿ ಹೇಳಲು ಕಾಲವಿನ್ನೂ ಪಕ್ವವಾಗಿಲ್ಲ ಎಂದು ರಾಜ್ಯ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಹಿರಿಯ ರಾಜಕೀಯ ವಿಶ್ಲೇಷಕ ಎಂ. ಸಿದ್ಧರಾಜು ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿದ ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸ್, ಎಸ್ ಬಂಗಾರಪ್ಪ, ಬಿ.ಎಸ್. ಯಡಿಯೂರಪ್ಪ ಅವರಾರು ಯಶಸ್ಸು ಕಾಣದೇ ವಿಫಲರಾಗಿದ್ದಾರೆ. ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದವರು ಹುಟ್ಟುಹಾಕಿದ ಪ್ರಾದೇಶಿಕ ಪಕ್ಷಗಳಿಗೇ ಮತದಾರರ ಮನ್ನಣೆ ದೊರೆಯದೇ ಇದ್ದಾಗ ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಗಟ್ಟಿಯಾಗಿ ನೆಲೆಯೂರುವ ಬಗ್ಗೆ ಎಂ ಸಿದ್ಧರಾಜು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿಗೆ ಗುಡ್ ಬೈ ಹೇಳಿ ಆ ಪಕ್ಷದಿಂದಲೇ ಹೊರಬಂದು ಜನಾರ್ದನ ರೆಡ್ಡಿ ಪ್ರತ್ಯೇಕ ಪ್ರಾದೇಶಿಕ ಪಕ್ಷ ಸ್ಥಾಪಿಸಿದ್ದು, ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ಕಣಕ್ಕಿಳಿಯಲು ಜನಾರ್ದನ ರೆಡ್ಡಿ ವೇದಿಕೆ ಸಿದ್ಧ ಪಡಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಹೈದರಾಬಾದ್ ಕರ್ನಾಟಕದಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿರುವುದು ಸ್ಪಷ್ಟವಾಗುತ್ತಿದೆ.
ಇದನ್ನೂ ಓದಿ: ಜನಾರ್ದನ ರೆಡ್ಡಿ ಪಕ್ಷದಿಂದ ಕಾಂಗ್ರೆಸ್ಗೆ ಲಾಭವಾಗುತ್ತೋ ನಷ್ಟವಾಗುತ್ತೋ ಮುಂದೆ ಗೊತ್ತಾಗಲಿದೆ: ಸತೀಶ್ ಜಾರಕಿಹೊಳಿ
ಬಿಜೆಪಿಯ ಭದ್ರ ಕೋಟೆಯಾಗಿರುವ ಹೈದರಾಬಾದ್ ಕರ್ನಾಟಕದ ಕ್ಷೇತ್ರಗಳ ಮೇಲೆ ಜನಾರ್ದನ ರೆಡ್ಡಿ ಕಣ್ಣಿಟ್ಟಿದ್ದು, ಆ ಭಾಗದಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲುವ ಮೂಲಕ ತಮ್ಮನ್ನು ಕಡೆಗಣಿಸಿರುವ ಬಿಜೆಪಿಗೆ ತಕ್ಕ ಪಾಠ ಕಲಿಸುವ ಹವಣಿಕೆಯಲ್ಲಿದ್ದಾರೆ.
ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಕರೆಯಲಾಗುತ್ತಿದ್ದು, ಆ ಕಾರಣಕ್ಕಾಗಿಯೇ ತಮ್ಮ ಪ್ರಾದೇಶಿಕ ಪಕ್ಷಕ್ಕೆ 'ಕಲ್ಯಾಣ ರಾಜ್ಯ ಪ್ರಗತಿ' ಪಕ್ಷವೆಂದು ಹೆಸರಿಟ್ಟಿದ್ದಾರೆ. ಹೈದರಾಬಾದ್ ಕರ್ನಾಟಕದ ಬಳ್ಳಾರಿ ಜಿಲ್ಲೆ ಮತ್ತು ಸುತ್ತಮುತ್ತಲ ಜಿಲ್ಲೆಗಳ ಕ್ಷೇತ್ರಗಳಲ್ಲಿ ಬಿಜೆಪಿಯ ಬಾವುಟ ಹಾರಿಸುವುದರಲ್ಲಿ ಜನಾರ್ದನ ರೆಡ್ಡಿಯ ಪಾತ್ರವೂ ಹೆಚ್ಚಿದ್ದು ಇದನ್ನು ಬಳಸಿಕೊಂಡು ಬಿಜೆಪಿಗೆ ಪ್ರತಿಸ್ಪರ್ಧೆ ನೀಡುವ ನಿಟ್ಟಿನಲ್ಲಿ ಕಾರ್ಯತಂತ್ರವನ್ನು ರೆಡ್ಡಿ ರೂಪಿಸತೊಡಗಿದ್ದಾರೆಂದು ಹೇಳಲಾಗುತ್ತಿದೆ.
ಕಲ್ಯಾಣ ಕರ್ನಾಟಕ ಪ್ರದೇಶದ ಬಳ್ಳಾರಿ, ವಿಜಯನಗರ, ಕೊಪ್ಪಳ, ಕಲ್ಬುರ್ಗಿ, ಬೀದರ್, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ 41 ವಿದಾನಸಭೆ ಕ್ಷೇತ್ರಗಳ ಮೇಲೆ ಜನಾರ್ದನ ರೆಡ್ಡಿ ಹೆಚ್ಚಿನ ಗಮನ ಹರಿಸಿದಂತಿದೆ. ಹೈದರಾಬಾದ್ ಕರ್ನಾಟಕದಲ್ಲಿ ಬಿಜೆಪಿ ಒಟ್ಟು 19 ಕ್ಷೇತ್ರಗಳನ್ನು 2018ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದೆ. ಈ ಭಾಗದಲ್ಲಿ ಜನಾರ್ದನ ರೆಡ್ಡಿ ಕುಟುಂಬ ತಮ್ಮದೇ ಆದ ಪ್ರಭಾವವನ್ನು ಹೊಂದಿದೆ.
ಹೈದರಾಬಾದ್ ಕರ್ನಾಟಕ ಪ್ರದೆಶದ ಜೊತೆಗೆ ಜನಾರ್ದನ ರೆಡ್ಡಿಯ ತವರು ಜಿಲ್ಲೆ ಬಳ್ಳಾರಿಗೆ ಹೊಂದಿಕೊಂಡಿರುವ ಚಿತ್ರದುರ್ಗ, ದಾವಣಗೆರೆ, ಗದಗ, ಹಾವೇರಿ ಜಿಲ್ಲೆಗಳ ಕೆಲವು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದು, ವಿದಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಸಿಗದವರಿಗೆ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದಿಂದ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ಜೊತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಬರುವವರನ್ನು ಪಕ್ಷಕ್ಕೆ ಸೇರಿಸಿಕೊಂಡು ಉದ್ದೇಶವನ್ನು ಜನಾರ್ದನ ರೆಡ್ಡಿ ಹೊಂದಿದ್ದಾರೆ ಎನ್ನಲಾಗಿದ್ದು, ತಮ್ಮ ಸಹೋದರರಾದ ಶಾಸಕ ಸೋಮಶೇಖರ ರೆಡ್ಡಿ, ಆತ್ಮೀಯ ಮಿತ್ರರಾಗಿರುವ ಸಾರಿಗೆ ಸಚಿವ ಶ್ರೀರಾಮುಲು ಅವರನ್ನು ಸಹ ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಬಿಜೆಪಿಗೆ ತೀವ್ರ ಪೈಪೋಟಿ ನೀಡುವ ಪ್ರಯತ್ನದಲ್ಲಿದ್ದಾರೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಹೊಸ ಪಕ್ಷ ಕಟ್ಟಿ ಯಾರು ಏನ್ ಮಾಡಿದ್ರು ಅನ್ನೋದು ಚರಿತ್ರೆಯಲ್ಲಿದೆ: ಸಿ.ಟಿ.ರವಿ