ಬೆಂಗಳೂರು: ಅಶ್ಲೀಲ ವಿಡಿಯೋ ನೋಡುವಂತೆ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ಪತ್ನಿ ದೂರು ನೀಡಿದ್ದಾಳೆ.
ಆರೋಪಿ ಪತಿ ಲತೀರ್ ರೆಹಮಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆ 2018ರಲ್ಲಿ ಮುಸ್ಲಿಂ ಸಂಪ್ರದಾಯದಂತೆ ಲತೀರ್ ಜೊತೆ ಮದುವೆ ಮಾಡಿಕೊಂಡಿದ್ದಳು. ಮದುವೆಯಾದ ಆರಂಭದಲ್ಲಿ ಸಂತೋಷವಾಗಿಯೇ ಇದ್ದರು. ನಂತರ ವರದಕ್ಷಿಣೆ ಹಣ ತರುವಂತೆ ಪೀಡಿಸಿದ್ದಾನೆ. ಇದಕ್ಕೆ ಗಂಡನ ಮನೆಯವರು ಸಾಥ್ ನೀಡಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ.
ನೀನು ನೋಡಲು ಚೆನ್ನಾಗಿಲ್ಲ. ವರದಕ್ಷಿಣೆಗಾಗಿ ನಿನ್ನನ್ನು ಮದುವೆಯಾಗಿದ್ದೇನೆ. ನಿನಗಿಂತ ಬೇರೆಯವರಿಗೆ ಮದುವೆಯಾಗಿದ್ದರೆ ಚೆನ್ನಾಗಿರುತ್ತಿದ್ದೆ ಎಂದು ಹೇಳಿ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾಳೆ.
ವೃತ್ತಿಯಲ್ಲಿ ವೈದ್ಯೆಯಾಗಿದ್ದ ನನಗೆ ಹಣ ಸಂಪಾದನೆ ಮಾಡಿಕೊಡುವಂತೆ ದುಂಬಾಲು ಬಿದ್ದಿದ್ದ. ಅಶ್ಲೀಲ ವಿಡಿಯೋ ತೋರಿಸಿ ನೋಡುವಂತೆ ಒತ್ತಾಯಿಸಿ ಮಾನಸಿಕ ಹಿಂಸೆ ನೀಡುತ್ತಿದ್ದ. ನನ್ನ ಬ್ಯಾಂಕ್ ಅಕೌಂಟ್ನಿಂದ ಹಣ ಪಡೆದು ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ. ಆತನ ಕಿರುಕುಳ ತಾಳಲಾರದೆ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ.