ಬೆಂಗಳೂರು: 'ಬೆಂಗಳೂರು ಕಂಬಳ-ನಮ್ಮ ಕಂಬಳ'ದಲ್ಲಿ ಅಡ್ಡ ಹಲಗೆ ಹಾಗೂ ಕೆನೆ ಹಲಗೆ ವಿಭಾಗದಲ್ಲಿ ಬೋಲಾರದ ಕಾಟೆ, ಬಾರಕೂರಿನ ಕುಟ್ಟಿ ಕೋಣಗಳ ಜೋಡಿ ಗೆಲುವು ಸಾಧಿಸುವುದೇ? ಅಥವಾ ಇನ್ಯಾರಾದರೂ ಗೆಲುವು ಸಾಧಿಸಬಹುದೇ? ಎನ್ನುವ ಚರ್ಚೆಗಳು ಕಂಬಳ ಮೈದಾನದಲ್ಲಿ ಪ್ರಾರಂಭವಾಗಿದೆ.
ಬೋಲಾರ್ ರಾಜ ಹಾಗೂ ಕಾಟೆ ಕೋಣಗಳು ಚಾಂಪಿಯನ್ ಆಗಲಿವೆ ಎಂಬುದು ಕಂಬಳಾಭಿಮಾನಿಗಳ ಭವಿಷ್ಯವಾಣಿ. ಬೋಲಾರದ ಕಾಟೆ ಕೋಣವನ್ನು ಓಡಿಸುತ್ತಿರುವ ಮಹೇಶ್ ಅವರು ನಟ ರಿಷಬ್ ಶೆಟ್ಟಿಗೆ 'ಕಾಂತಾರ' ಸಿನಿಮಾದಲ್ಲಿ ಕೋಣ ಓಡಿಸಲು ಹೇಳಿಕೊಟ್ಟವರು. ವಿಶೇಷವಾಗಿ, ಬೋಲಾರದ ಚಾಂಪಿಯನ್ ಕೋಣ ಕಾಟೆಗೆ ಇನ್‌ಸ್ಟಾಗ್ರಾಂನಲ್ಲಿ ವಿಶೇಷ ಪೇಜ್ ಕೂಡಾ ಇದೆ. ಟೀಮ್ ಬೋಲಾರ್ ಪೇಜ್‌ನಲ್ಲಿ ಸಾವಿರಾರು ಫಾಲೋವರ್ಸ್ ಇದ್ದು ಗೆಲುವಿಗಾಗಿ ಶುಭ ಹಾರೈಸಿದ್ದಾರೆ.
ಕುಟ್ಟಿ ಹಾಗೂ ರಾಜೆ ಕೋಣಗಳೂ ಸಹ ಗೆಲುವಿಗಾಗಿ ಸಜ್ಜುಗೊಂಡಿವೆ. ಇವುಗಳು ಕೂಡಾ ಕಣ್ಣು ಮಿಟುಕಿಸುವುದರೊಳಗೆ ಓಟ ಮುಗಿಸುವ ಕೋಣಗಳೇ ಆಗಿವೆ. ಕಕ್ಕೆಪದವಿನಲ್ಲಿ ನಡೆದ 2023-24ನೇ ಸಾಲಿನ ಮೊದಲ ಕಂಬಳದ ಅಡ್ಡ ಹಲಗೆ ವಿಭಾಗದಲ್ಲಿ ನಾರಾವಿ ಕೋಣದ ತಂಡವನ್ನು ಈ ಕಾಟೆ ಜೋಡಿ ಕೇವಲ 1 ಸೆಕೆಂಡ್ ಅಂತರದಲ್ಲಿ ಸೋಲಿಸಿತ್ತು. ಆಗ 100 ಮೀಟರ್ ದೂರವನ್ನು ಕೇವಲ 11.082 ಸೆಕೆಂಡ್‌ನಲ್ಲಿ ಕ್ರಮಿಸಿತ್ತು. ಪ್ರಸ್ತುತ ಇದೇ ಎರಡು ತಂಡಗಳು ಕಂಬಳದ ಫೈನಲ್ ಸ್ಪರ್ಧೆಯಲ್ಲಿ ಮುಖಾಮುಖಿಯಾಗುವ ಸಾಧ್ಯತೆಗಳಿವೆ.
ಬಾರಕೂರು ಕುಟ್ಟಿ-ಪುಡಿ ಜೋಡಿಯು ಕರಾವಳಿಯಲ್ಲಿ ನಡೆದಿರುವ ಕಂಬಳದಲ್ಲಿ ವಿಶೇಷ ಸಾಧನೆ ಮಾಡಿದೆ. ಕುಟ್ಟಿ ಕಳೆದ ಆರು ವರ್ಷದಿಂದ ಕೆನೆ ಹಲಗೆ ವಿಭಾಗದಲ್ಲಿ ಸುಮಾರು 75ಕ್ಕೂ ಅಧಿಕ ಮೆಡಲ್ ಹಾಗೂ ಬಡಗು ಸಾಂಪ್ರದಾಯಿಕ ಕಂಬಳದಲ್ಲಿ 100ಕ್ಕೂ ಅಧಿಕ ಪದಕಗಳನ್ನು ಜಯಿಸಿದೆ. ಕುಟ್ಟಿ ಜೋಡಿ 2019-20 ಹಾಗೂ 2020-21ನೇ ಸಾಲಿನ ಚಾಂಪಿಯನ್ ಆಗಿದೆ.
ಕಾಟೆ-ರಾಜೆ ಜೋಡಿ ಕಳೆದ ಬಾರಿಯಲ್ಲಿ ಅಡ್ಡ ಹಲಗೆ ವಿಭಾಗದಲ್ಲಿ ಭಾಗವಹಿಸಿದ 10 ಪಂದ್ಯದಲ್ಲಿಯೂ ಬಹುಮಾನ ಪಡೆದು ಚಾಂಪಿಯನ್ ಆಗಿವೆ. ಈ ಸಾಲಿನ ಮೊದಲ ಕಂಬಳದಲ್ಲಿಯೂ ಪದಕ ಗೆದ್ದುಕೊಂಡಿದ್ದು, ನಮ್ಮ ಕಂಬಳದಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತಿದ್ದು, ಚಾಂಪಿಯನ್ ಪಟ್ಟ ಅಲಂಕರಿಸಲಿವೆ ಎಂದು ಬೋಲಾರ್ ಕೋಣಗಳ ತಂಡ ಮಾಲೀಕ ತ್ರಿಶಾಲ್ ಪೂಜಾರಿ ಹೇಳಿದರು.
ನಮ್ಮ ಕೋಣಗಳು ಸಂಪ್ರದಾಯಿಕ ಹಾಗೂ ಬಡಗು ಕಂಬಳದಲ್ಲಿ ಭಾಗವಹಿಸಿವೆ. ನೂರಾರು ಪದಕ ಗಳಿಸಿದೆ. ಬೆಂಗಳೂರು ಕಂಬಳದಲ್ಲೂ ಗೆದ್ದು ಹೊಸ ದಾಖಲೆ ನಿರ್ಮಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಬಾರಕೂರು ಕಂಬಳ ಕೋಣದ ಮಾಲೀಕ ಶಾಂತರಾಮ ಶೆಟ್ಟಿ.
ಇದನ್ನೂ ಓದಿ: ಅರೆಮನೆ ಅಂಗಳದಲ್ಲಿ ಬೆಂಗಳೂರು ಕಂಬಳ; ಅಖಾಡಕ್ಕಿಳಿದ ಕಟ್ಟುಮಸ್ತಾದ ಕೋಣಗಳು