ಬೆಂಗಳೂರು: ''ಯಾವ ಹಿರಿಯ ಕಾಂಗ್ರೆಸ್ ಶಾಸಕರಿಗೆ ಅಸಮಾಧಾನ ಇಲ್ಲ. ಆದ್ರೆ, ನೋವು ಹೇಳಿಕೊಳ್ಳುವುದರಲ್ಲಿ ತಪ್ಪಿಲ್ಲ'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು. ಸದಾಶಿವ ನಗರದಲ್ಲಿ ಮಾತನಾಡಿದ ಅವರು, ''ಎಲ್ಲಾ ನೀವೇ ಕ್ರಿಯೇಟ್ ಮಾಡುತ್ತಿದ್ದಿರಿ. ನಮ್ಮ ಯಾವುದೇ ಶಾಸಕರಲ್ಲಿ ಅಸಮಾಧಾನವಿಲ್ಲ. ನಮ್ಮ ಪಕ್ಷದಲ್ಲಿ ಶಿಸ್ತು ಇದೆ. ಶಾಸಕರು ತಮ್ಮ ನೋವನ್ನು ತೋಡಿಕೊಳ್ಳಬಾರದಾ? ನೋವು ತೋಡಿಕೊಳ್ಳುವುದರಲ್ಲಿ ಏನು ತಪ್ಪಿದೆ? ಇರದಲ್ಲಿ ಯಾವುದೇ ತಪ್ಪಿಲ್ಲ'' ಎಂದು ಡಿಕೆಶಿ ಹೇಳಿದರು.
ಖಾಸಗಿ ಸಾರಿಗೆ ಒಕ್ಕೂಟ ಬಂದ್ಗೆ ಕರೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ''ಪಾಪ ತೊಂದರೆಯಾಗಿರೋದು ನಿಜ. ಈ ಕುರಿತು ನಮಗೆ ತಿಳಿದಿದೆ. ಖಾಸಗಿ ಬಸ್ಗೆ ಯಾರೂ ಹೋಗ್ತಿಲ್ಲ. ಅದಕ್ಕೆ ಒಂದು ಉಪಾಯ ಕಂಡು ಹಿಡಿಯಬೇಕಿದೆ. ನಾನು ಸಿಎಂ ಹತ್ತಿರ ಮಾತನಾಡುತ್ತೇನೆ. ಸಾರಿಗೆ ಸಚಿವರ ಬಳಿಯೂ ಚರ್ಚೆ ಮಾಡುತ್ತೇನೆ. ಕೆಲವು ಜಿಲ್ಲೆಗಳಲ್ಲಿ ಸರ್ಕಾರಿ ಬಸ್ಗಳೇ ಇಲ್ಲ. ಖಾಸಗಿ ಬಸ್ಗಳೇ ಅಲ್ಲಿ ಇರೋದು. ಅದಕ್ಕೆ ಏನಾದ್ರೂ ಉಪಾಯ ಮಾಡ್ತೇವೆ'' ಎಂದು ಅವರು ಭರವಸೆ ನೀಡಿದರು.
ಆದಿತ್ಯ ಎಲ್-1 ಉಡಾವಣೆಗೆ ಡಿಕೆಶಿ ಅಭಿನಂದನೆ: ಇಸ್ರೋದಿಂದ ಆದಿತ್ಯ ಎಲ್-1 ಉಡಾವಣೆ ಹಿನ್ನೆಲೆ ಡಿ.ಕೆ. ಶಿವಕುಮಾರ್ ಶುಭ ಹಾರೈಸಿದರು. ''ಭಾರತಕ್ಕೆ ಗೌರವ ತರುವ ಕೆಲಸ ನಮ್ಮ ಇಸ್ರೋ ಮಾಡ್ತಿದೆ. ನಮ್ಮ ಕರ್ನಾಟಕದ ಇಸ್ರೋ ಉತ್ತಮ ಸಾಧನೆ ಮಾಡುತ್ತಿದೆ. ಇದು ದೊಡ್ಡ ಪ್ರಯೋಗ, ಪ್ರಯತ್ನ, ಸಾಹಸ ಎಲ್ಲವನ್ನೂ ಕೂಡ ಮಾಡ್ತಾ ಇದೆ. ಯಶಸ್ಸು ಸಿಗಲಿ ಎಂದು ನಾನು ಶುಭ ಹಾರೈಸುತ್ತೇನೆ. ಇಡೀ ದೇಶದ ಜನ ಅವರಿಗೆ ಪ್ರಾರ್ಥನೆ ಮಾಡ್ತಿದ್ದಾರೆ. ಇಡೀ ವಿಶ್ವದಲ್ಲೇ ನಮ್ಮ ಇಸ್ರೋ ಪ್ರಸಿದ್ಧಿಯಾಗಿದೆ. ಬಹಳ ಶ್ರಮದಿಂದ ಕೆಲಸ ಮಾಡ್ತಿದೆ. ಅವರ ಅನುಭವದಿಂದ ಒಳ್ಳೆ ಕೆಲಸ ಮಾಡ್ತಿದ್ದಾರೆ ಎಂದರು.
ಆದಿತ್ಯ ಎಲ್- 1 ಯಶಸ್ಸಿಗಾಗಿ ವಿವಿಧೆಡೆ ಪೂಜೆ: ಆದಿತ್ಯ ಎಲ್- 1 ಯಶಸ್ಸಿಗಾಗಿ ದೇಶಾದ್ಯಂತ ವಿವಿಧ ದೇವಾಲಯಗಳಲ್ಲಿ ಹೋಮಗಳು ಹಾಗೂ ಪೂಜೆಗಳನ್ನು ನೆರವೇರಿಸಲಾಗಿತ್ತು. ಉತ್ತರ ಪ್ರದೇಶದ ವಾರಾಣಸಿಯ ದೇವಸ್ಥಾನದಲ್ಲಿ ಹೋಮ ಮಾಡಲಾಗಿತ್ತು. ಉತ್ತರಾಖಂಡ ರಾಜ್ಯದಲ್ಲಿ ಸೂರ್ಯ ನಮಸ್ಕಾರವನ್ನು ಮಾಡಲಾಯಿತು. ಜೊತೆಗೆ ಉಡಾವಣೆಯನ್ನು ನೇರವಾಗಿ ವೀಕ್ಷಿಸಲು ಅನೇಕರು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ಬಂದಿದ್ದರು. ವಿದ್ಯಾರ್ಥಿಗಳೂ ತಮ್ಮ ಸ್ನೇಹಿತರ ಜೊತೆಗೆ ಬಂದು ಸೂರ್ಯಾಯಾನದ ಕ್ಷಣಗಳನ್ನು ಕಣ್ತುಂಬಿಕೊಂಡಿದ್ದಾರೆ. ಇದಕ್ಕೂ ಮುನ್ನ ಚಂದ್ರಯಾನ-3 ಮಿಷನ್ ಯಶಸ್ಸುಗೊಂಡಿತ್ತು. ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದೆ ಎನ್ನುವುದನ್ನು ಸ್ಮರಿಸಬಹುದಾಗಿದೆ.
ಇದನ್ನೂ ಓದಿ: ಆದಿತ್ಯ ಎಲ್1 ರಾಕೆಟ್ ಯಶಸ್ವಿಯಾಗಿ ಉಡ್ಡಯನ ..