ಬೆಂಗಳೂರು: ಕೋವಿಡ್ 19 ನಿಯಂತ್ರಿಸಲು ಇದೀಗ ಸರ್ಕಾರ ಸಂಪೂರ್ಣ ಲಾಕ್‌ಡೌನ್ ಹೊರತಾದ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಈ ಸಂಬಂಧ ಸಿಎಂ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಕೆಲ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಸಿಎಂ ನಿವಾಸ ಕಾವೇರಿಯಲ್ಲಿ ನಡೆದ ತುರ್ತು ಸಭೆಯ ಇನ್ಸೈಡ್ ಡಿಟೇಲ್ಸ್ ಇಲ್ಲಿದೆ.
ಜುಲೈ 5ರ ಬಳಿಕ ಪ್ರತಿ ಭಾನುವಾರ ರಾಜ್ಯಾದ್ಯಂತ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ. ಇದಕ್ಕೂ ಮುನ್ನ ಸಭೆಯಲ್ಲಿ ಸಿಎಂ ಭಾನುವಾರದ ಜೊತೆ ಶನಿವಾರ ಕೂಡಾ ಲಾಕ್‌ಡೌನ್ ಮಾಡುವ ಬಗ್ಗೆ ಒಲವು ತೋರಿದ್ದರು ಎನ್ನಲಾಗಿದೆ. ಆದರೆ, ತಕ್ಷಣಕ್ಕೆ ವಾರದಲ್ಲಿ ಎರಡು ದಿನ ಲಾಕ್‌ಡೌನ್ ಬೇಡ, ಒಂದೆರಡು ಸಂಡೇ ಲಾಕ್‌ಡೌನ್ ಮಾಡೋಣ. ಸೋಂಕು ಪ್ರಮಾಣ ನಿಯಂತ್ರಣಕ್ಕೆ ಬರದಿದ್ದರೆ ನಂತರ ಶನಿವಾರ ಮತ್ತು ಭಾನುವಾರ ಎರಡು ದಿನ ಮಾಡುವುದು ಒಳಿತು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಆಗಲೂ ನಿಯಂತ್ರಣ ಸಾಧ್ಯವಾಗದಿದ್ದಲ್ಲಿ ಮತ್ತೆ ರ್ಯಾಂಡಮ್ ಟೆಸ್ಟ್ ಮಾಡೋಣ. ವೈದ್ಯಕೀಯ ಸೌಲಭ್ಯ ಹೆಚ್ಚು ಮಾಡುವತ್ತ ಗಮನ ಹರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದು, ಹೀಗಾಗಿ ಸದ್ಯ ಭಾನುವಾರ ಮಾತ್ರ ಲಾಕ್‌ಡೌನ್ ಮಾಡುವ ಬಗ್ಗೆ ಸಿಎಂ ಒಪ್ಪಿಗೆ ಸೂಚಿಸಿದರು.
ಇನ್ನು ಜುಲೈ 10ರಿಂದ ಒಂದು ತಿಂಗಳ ಕಾಲ ಈಗಾಗಲೇ ರಜೆಯಿರುವ 2ನೇ ಹಾಗೂ 4ನೇ ಶನಿವಾರದ ಜೊತೆಗೆ ಉಳಿದ ಶನಿವಾರದಂದು ಎಲ್ಲಾ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯಕ್ಕೊಳಪಡುವ ಎಲ್ಲಾ ಕಚೇರಿಗಳಿಗೆ ರಜೆ ಘೋಷಿಸಲು ತೀರ್ಮಾನಿಸಲಾಯಿತು. ಪ್ರತಿ ದಿನ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಈಗಾಗಲೇ ಇರುವ ಕರ್ಫ್ಯೂ ಅವಧಿಯ ಬದಲಾಗಿ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಅವಧಿಯನ್ನು ಬದಲಾಯಿಸಲು ತೀರ್ಮಾನಿಸಲಾಯಿತು.
ಹೆಚ್ಚಿನ ಸಗಟು ಮಾರುಕಟ್ಟೆ ತೆರಯಲು ಸೂಚನೆ:
ಬೆಂಗಳೂರಿನಲ್ಲಿರುವ ಬೃಹತ್ ಹೋಲ್‍ಸೇಲ್ ತರಕಾರಿ ಮಾರುಕಟ್ಟೆಗಳಲ್ಲಿ ಆಗುವ ಜನದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ ಹೆಚ್ಚಿನ ಹೋಲ್‍ಸೇಲ್ ತರಕಾರಿ ಮಾರುಕಟ್ಟೆಗಳನ್ನು ತೆರೆಯಲು ಬಿಬಿಎಂಪಿ ಆಯುಕ್ತರಿಗೆ ಸಿಎಂ ಸೂಚಿಸಿದರು.
ಅಂಬ್ಯುಲೆನ್ಸ್ ಸಂಖ್ಯೆ ಹೆಚ್ಚಿಸಲು ಸೂಚನೆ:
ಕೋವಿಡ್-19 ಸೋಂಕಿತ ರೋಗಿಗಳನ್ನು ಶೀಘ್ರವಾಗಿ ಕೋವಿಡ್ ಆಸ್ಪತ್ರೆಗಳಿಗೆ ಸೇರಿಸಲು (ಸೆಂಟ್ರಲೈಜ್ ಬೆಡ್ ಅಲೋಕೇಷನ್ ಸಿಸ್ಟಮ್) ತಂತ್ರಾಂಶದ ಮೂಲಕ ಜಾರಿಗೊಳಿಸಲು ಕ್ರಮ ವಹಿಸಲು ನಿರ್ಧರಿಸಲಾಗಿದೆ.
ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಗಳನ್ನು ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್ ಸಂಖ್ಯೆಗಳನ್ನು 250ಕ್ಕೆ ಹೆಚ್ಚಿಸಲು ಮತ್ತು ಕೋವಿಡ್‍ನಿಂದ ಮೃತರಾದ ದೇಹಗಳನ್ನು ಸಾಗಿಸಲು ಪ್ರತ್ಯೇಕ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ತೀರ್ಮಾನಿಸಲಾಯಿತು. ಅಂಬ್ಯುಲೆನ್ಸ್ ಇರುವ ಸ್ಥಳವನ್ನು ಗುರ್ತಿಸಲು ಮತ್ತು ಅವುಗಳ ಸರಳ ಚಲನವಲನಗಳ ಸಲುವಾಗಿ ಪೊಲೀಸ್ ಕಂಟ್ರೋಲ್ ರೂಂ ವೈರ್‌ಲೆಸ್ ಸೇವೆಯನ್ನು ಬಳಸಿಕೊಳ್ಳಲು ಸೂಚನೆ ನೀಡಿದರು.
ಕೋವಿಡ್‍ನಿಂದ ಮೃತರಾದ ದೇಹಗಳ ಅಂತ್ಯಕ್ರಿಯೆ ಮಾಡಲು ಪ್ರತ್ಯೇಕ ತಂಡಗಳನ್ನು ರಚಿಸುವುದು ಹಾಗೂ ದೇಹಗಳ ಅಂತ್ಯಕ್ರಿಯೆಯ ಸಲುವಾಗಿ ಇನ್ನೂ ಹೆಚ್ಚಿನ ಜಾಗಗಳನ್ನು ಗುರ್ತಿಸಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸೂಚಿಸಲು ತೀರ್ಮಾನಿಸಲಾಯಿತು.
ಪಾಲಿಕೆ ಜಂಟಿ ಆಯುಕ್ತರಿಗೆ ಹೆಚ್ಚಿನ ಹೊಣೆ:
ಇನ್ನು ಬಿಬಿಎಂಪಿ ಕೇಂದ್ರ ಕಚೇರಿ ಹಾಗೂ ಆಯುಕ್ತರ ಮೇಲೆ ಇರುವ ಕೆಲಸದ ಹೊರೆಯನ್ನು ಕಡಿಮೆಗೊಳಿಸಲು ಬಿ.ಬಿ.ಎಂ.ಪಿಯಲ್ಲಿನ 8 ವಲಯಗಳ ಜಂಟಿ ಆಯುಕ್ತರಿಗೆ ಹೆಚ್ಚಿನ ಜವಾಬ್ದಾರಿ ಹಾಗೂ ಕೆಲಸಗಳನ್ನು ನೀಡಲು ಮತ್ತು ಅವರ ಜೊತೆಗೆ ಕೆಲಸ ಮಾಡಲು ಕೆಎಎಸ್ ಅಧಿಕಾರಿಗಳನ್ನು ನಿಯೋಜಿಸಲು ತೀರ್ಮಾನಿಸಲಾಯಿತು.
ಕೋವಿಡ್-19ರ ನಿಯಂತ್ರಣದಲ್ಲಿ ಕೆಲಸ ಮಾಡುವ ಎಲ್ಲಾ ನೋಡಲ್ ಅಧಿಕಾರಿಗಳ ವಿವರಗಳನ್ನು ಪತ್ರಿಕೆಗಳ ಜಾಹಿರಾತು ಮುಖಾಂತರ ಸಾರ್ವಜನಿಕರಿಗೆ ಪ್ರಚುರಪಡಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ವೈದ್ಯರ ಕೊರತೆಯನ್ನು ನೀಗಿಸಲು ಕಾರ್ಮಿಕ ಇಲಾಖೆಯಿಂದ ನೇಮಕವಾಗಿರುವ 180 ಎ.ಎಸ್.ಐ ಡಾಕ್ಟರ್ಗಳನ್ನು ಕೋವಿಡ್ ಕರ್ತವ್ಯಕ್ಕೆ ಬಳಸಿಕೊಳ್ಳಲು ಮತ್ತು ಪರೀಕ್ಷಾರ್ತಿ ತಹಶೀಲ್ದಾರ್ಗಳನ್ನು ಕೋವಿಡ್ ಆಸ್ಪತ್ರೆಗಳು/ಕೇರ್ ಸೆಂಟರ್ ಗಳಿಗೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲು ಸೂಚಿಸಲಾಯಿತು.
ಕಲ್ಯಾಣ ಮಂಟಪ, ಹೋಟೆಲ್ ಬಳಕೆಗೆ ಸೂಚನೆ:
ಬೆಂಗಳೂರಿನಲ್ಲಿ ಲಭ್ಯವಿರುವ ಕಲ್ಯಾಣ ಮಂಟಪಗಳು, ಹಾಸ್ಟೆಲ್‍ಗಳು ಹಾಗೂ ಇನ್ನಿತರೆ ಸಂಸ್ಥೆಗಳನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ಮೀಸಲಿಡಲು ಹಾಗೂ ರೈಲ್ವೆ ಇಲಾಖೆಯಿಂದ ಬೆಡ್‍ಗಳ ಕೋಚ್ ಅನ್ನು ಪಡೆಯಲು ಅವಶ್ಯ ಕ್ರಮ ಜರುಗಿಸಲು ಸೂಚಿಸಲಾಯಿತು.
ಮೆಡಿಕಲ್ ಕಾಲೇಜ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್‍ಗಳ ಪೈಕಿ ಶೇ.50ರಷ್ಟನ್ನು ಕೋವಿಡ್ ರೋಗಿಗಳ ಸಲುವಾಗಿ ಮೀಸಲಿಡಲು ಬಿ.ಬಿ.ಎಂ.ಪಿ ಆಯುಕ್ತರಿಗೆ ಸೂಚಿಸಿದರು. ಆಸ್ಪತ್ರೆಗಳಲ್ಲಿ ಬೆಡ್‍ಗಳು ಪೂರ್ತಿಯಾದ ನಂತರ ಹೋಟೆಲ್ ಕೊಠಡಿಗಳನ್ನು ರೋಗಿಗಳ ಚಿಕಿತ್ಸೆಗಾಗಿ ಬಳಸಿಕೊಳ್ಳುವ ಉದ್ದೇಶದಿಂದ ಹೋಟೆಲ್‍ಗಳನ್ನು ಆಸ್ಪತ್ರೆಗಳಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲು ಬಿ.ಬಿ.ಎಂ.ಪಿ ಆಯುಕ್ತರಿಗೆ ಸೂಚಿಸಿದರು.
ಹೊರಗಿನವರಿಗೆ ಪ್ರವೇಶ ನಿರ್ಬಂಧ ಬಗ್ಗೆ ಚರ್ಚೆ:
ಬೆಂಗಳೂರಿಗೆ ಹೊರಗಿನಿಂದ ಪ್ರವೇಶ ನಿರ್ಬಂಧಿಸುವ ವಿಚಾರದ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಯಿತು. ಆದರೆ ಪ್ರಯಾಣ ನಿರ್ಬಂಧಿಸಿದರೆ ಕಷ್ಟವಾಗಬಹುದು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಹೀಗಾಗಿ ಬೆಂಗಳೂರಿಗೆ ಹೊರಗಿನಿಂದ ಪ್ರಯಾಣ ನಿರ್ಬಂಧ ಬಗ್ಗೆ ಇಂದು ಸಭೆಯಲ್ಲಿ ಯಾವುದೇ ತೀರ್ಮಾನ ಮಾಡಿಲ್ಲ.
ಬೆಂಗಳೂರಿನಲ್ಲಿ ಕೊರೊನಾ ತಡೆಗೆ ಅಂತರ್ ಜಿಲ್ಲಾ ಪ್ರಯಾಣ ರದ್ದು ಮಾಡಲು ತಜ್ಞರು ಸಲಹೆ ನೀಡಿದ್ದರು. ಆದರೆ ಸದ್ಯ ಆ ಬಗ್ಗೆ ನಿರ್ಧಾರ ಕೈಗೊಳ್ಳದಿರಲು ತೀರ್ಮಾನಿಸಲಾಗಿದೆ.