ಬೆಂಗಳೂರು: ಪ್ರವಾಹ ಹಾಗೂ ಭಾರಿ ಮಳೆ ಹಿನ್ನೆಲೆ ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಹಾಗಾಗಿ ರಜೆಗಳನ್ನು ಸರಿದೂಗಿಸಲು ಶನಿವಾರ ಮತ್ತು ಭಾನುವಾರ ತರಗತಿ ನಡೆಸಲು ಶಿಕ್ಷಣ ಇಲಾಖೆ ಸೂಚಿಸಿದೆ.
ಸಾಲು ಸಾಲು ರಜೆ ನೀಡಿಕೆ ಹಿನ್ನೆಲೆ ಈ ಮೊದಲು ದಸರಾ ರಜೆಯನ್ನ ಕಡಿತಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ಆದರೆ ಈ ನಿರ್ಧಾರದಿಂದ ಈಗ ಹಿಂದೆ ಸರಿದಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯಾ ಜಿಲ್ಲಾ ನಿರ್ದೇಶಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ರಜೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಪ್ರವಾಹ ಉಂಟಾಗಿದ್ದ ಜಿಲ್ಲೆಗಳಲ್ಲಿ ಮಾತ್ರ ಎಷ್ಟು ದಿನಗಳ ಕಾಲ ರಜೆಯನ್ನು ನೀಡಲಾಗಿದ್ಯೋ ಅಷ್ಟು ದಿನಗಳನ್ನು ಬೇರೆ ದಿನಗಳಲ್ಲಿ ತರಗತಿ ನಡೆಸಿ ಸರಿದೂಗಿಸಲು ಹೇಳಲಾಗಿದೆ. ಅವಶ್ಯಕತೆ ಇದ್ದರೆ ಶನಿವಾರ ಭಾನುವಾರವೂ ಶಾಲೆಗಳಲ್ಲಿ ತರಗತಿ ನಡೆಸಲು ಸೂಚಿಸಲಾಗಿದೆ.