ಬೆಂಗಳೂರು: ನೈರುತ್ಯ ಮುಂಗಾರು ಕರಾವಳಿಯಲ್ಲಿ ಚುರುಕಾಗಿದ್ದು ಅಲ್ಲಿನ ಬಹುತೇಕ ಕಡೆ ಭಾರಿ ಮಳೆಯಾಗಿದೆ, ಒಳನಾಡಿನಲ್ಲಿ ಮಳೆಯ ಪ್ರಮಾಣ ದುರ್ಬಲವಾಗಿದೆ. ಮುಂದಿನ 24 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆದರೆ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ರಾಜ್ಯದ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದ್ದು, ಒಳನಾಡಿನಲ್ಲಿ ಬಿರುಗಾಳಿಯ ವೇಗವು ಗಂಟೆಗೆ 30 ರಿಂದ 40 ಕಿ.ಮೀ. ಇರಲಿದೆ. ಮೀನುಗಾರರಿಗೆ ಯಾವುದೇ ಎಚ್ಚರಿಕೆ ನೀಡಲಾಗಿಲ್ಲ ಎಂದು ತಿಳಿಸಿದೆ. ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ರಾತ್ರಿಯ ವೇಳೆಯಲ್ಲಿ ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಎಷ್ಟು ಮಳೆ: ಮುಖ್ಯವಾಗಿ ಇಂದು ಅತಿ ಹೆಚ್ಚು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ 9 ಸೆಂ. ಮೀ. ಮಳೆಯಾಗಿದೆ. ಕುಮಟ, ಅಂಕೋಲದಲ್ಲಿ ತಲಾ 6 ಸೆಂ.ಮೀ, ಹೊನ್ನಾವರದಲ್ಲಿ 5 ಮತ್ತು ಕಾರವಾರದಲ್ಲಿ 4 ಸೆಂ.ಮೀ ಮಳೆಯಾಗಿದೆ.
ಉಳಿದಂತೆ ಕೊಲ್ಲೂರು (ಉಡುಪಿ ಜಿಲ್ಲೆ) 3, ಉಡುಪಿ, ಮುನಿರಾಬಾದ್ (ಕೊಪ್ಪಳ ಜಿಲ್ಲೆ), ಹೆಸರಘಟ್ಟ (ಬೆಂಗಳೂರು ನಗರ ಜಿಲ್ಲೆ ), ಕಳಸ (ಚಿಕ್ಕಮಗಳೂರು ಜಿಲ್ಲೆ ), ಲಿಂಗನಮಕ್ಕಿ ಎಚ್‌ಎಂಎಸ್ (ಶಿವಮೊಗ್ಗ ಜಿಲ್ಲೆ ), ಕಂಪ್ಲಿ (ಬಳ್ಳಾರಿ) ತಲಾ 2; ಕುಂದಾಪುರ, ಕೋಟ (ಎರಡೂ ಉಡುಪಿ ಜಿಲ್ಲೆ ), ಯಲ್ಲಾಪುರ, ಗೇರುಸೊಪ್ಪ (ಎರಡೂ ಉತ್ತರ ಕನ್ನಡ ಜಿಲ್ಲೆ ), ರೋನ್ (ಗದಗ ಜಿಲ್ಲೆ ) , ಕುಂದಗೋಳ (ಧಾರವಾಡ ಜಿಲ್ಲೆ ), ಗಂಗಾವತಿ (ಕೊಪ್ಪಳ ಜಿಲ್ಲೆ ) , ತಿಪಟೂರು (ತುಮಕೂರು ಜಿಲ್ಲೆ ) , ಜಯಪುರ, ಕಮ್ಮರಡಿ , ಬಾಳೆಹೊನ್ನೂರು (ಎಲ್ಲಾ ಚಿಕ್ಕಮಗಳೂರು ಜಿಲ್ಲೆ ), ಸಂಡೂರು (ಬಳ್ಳಾರಿ ಜಿಲ್ಲೆ ), ಹೊಸಪೇಟೆ (ವಿಜಯನಗರ ಜಿಲ್ಲೆ ) , ಬಿ ದುರ್ಗ (ಚಿತ್ರದುರ್ಗ ಜಿಲ್ಲೆ ) , ಮಾಲೂರು (ಕೋಲಾರ ಜಿಲ್ಲೆ ) ತಲಾ 1 ಸೆಂ.ಮೀ. ಮಳೆಯಾಗಿದೆ.
ಇದನ್ನೂ ಓದಿ: ನಾಳೆ ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರ: ಯೆಲ್ಲೊ ಅಲರ್ಟ್ ಘೋಷಣೆ, ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಮುನ್ಸೂಚನೆ