ಬೆಂಗಳೂರು: ಡಿಸೆಂಬರ್ನಲ್ಲಿ ನಡೆಯಲಿರುವ ಉಪಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 15 ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ನ್ಯಾಯಾಲಯದ ತೀರ್ಪು ನೋಡಿ ಅಕ್ಟೋಬರ್ 23-24 ಕ್ಕೆ ಪಟ್ಟಿ ಬಿಡುಗಡೆ ಮಾಡ್ತೀವಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್. ಪ್ರಕಾಶ್ ತಿಳಿಸಿದ್ದಾರೆ.
ನಗರದ ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜೀನಾಮೆ ನೀಡಿ ನಂತರ ಅನರ್ಹರಾಗಿರುವ 15 ಶಾಸಕರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಆಗಿದೆ. 15 ಕ್ಷೇತ್ರಗಳಿಗೂ ಅಭ್ಯರ್ಥಿಗಳ ಬ್ಲೂ ಪ್ರಿಂಟ್ ರೆಡಿ ಮಾಡಿದ್ದು, ನ್ಯಾಯಾಲಯದ ತೀರ್ಪು ನೋಡಿ ಅ. 23-24 ಕ್ಕೆ ಪಟ್ಟಿ ಬಿಡುಗಡೆ ಮಾಡ್ತೀವಿ ಎಂದರು. ಎಸ್.ಟಿ. ಸೋಮಶೇಖರ್ ಪಲಾಯನ ಮಾಡಿದ್ದೇ ಸೋಲುವ ಭಯದಿಂದ, ಬಿಜೆಪಿ ವಿರುದ್ಧ ಗುಡುಗಿದ್ದ ಅವರು ಈಗ ಬಿಜೆಪಿ ಸೇರ್ತಿದ್ದಾರೆ. ನಮ್ಮ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಯಾವುದೇ ಗೊಂದಲ ಇಲ್ಲ, ಈ ಬಾರಿ ಕೂಡ ಯಶವಂತಪುರಕ್ಕೆ ಜವರಾಯಿಗೌಡರೇ ಜೆಡಿಎಸ್ ಅಭ್ಯರ್ಥಿ ಆಗ್ತಾರೆ ಎಂದು ಹೇಳಿದರು.
ಇನ್ನು ನಗರದ ಐದೂ ಜನ ಅನರ್ಹ ಶಾಸಕರಲ್ಲಿ ಅಕ್ರಮ ಹಣ ಇದೆ. ಮತದಾರರಿಗೆ ಈಗಲೇ ಹಣ ಹಂಚೋಕೆ ಶುರು ಮಾಡಿದ್ದಾರೆ. ಆದರೂ ಐಟಿ ಇಲಾಖೆ ಯಾಕೆ ಈ ಐವರು ಶಾಸಕರ ಮೇಲೆ ದಾಳಿ ಮಾಡ್ತಿಲ್ಲ. ಎಲ್ಲ ನಿಯಮ ಗಾಳಿಗೆ ತೂರಿ ಟೆಂಡರ್ ತೆಗೆದುಕೊಳ್ತಿದ್ದಾರೆ. ಆ ಮೂಲಕ ಹಣ ಮಾಡುತ್ತಲೂ ಇದ್ದಾರೆ. ದಯಮಾಡಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.