ಬೆಂಗಳೂರು: ಕನ್ನಡ ಉಳಿಸುವ ಕಾನೂನನ್ನು ಇಡೀ ಬೆಂಗಳೂರಲ್ಲಿ ಜಾರಿಗೆ ತರಿಸುವ ಕೆಲಸ ಮಾಡಿಸುತ್ತೇವೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಹೇಳಿದ್ದಾರೆ.
ಒಂದೆಡೆ ಬಿಬಿಎಂಪಿ ಅಂಗಡಿ ಮಳಿಗೆಗಳ ನಾಮ ಫಲಕದಲ್ಲಿ ಶೇಕಡಾ ಅರವತ್ತರಷ್ಟು ಕನ್ನಡ ಕಡ್ಡಾಯ ಮಾಡಲು ಜಾರಿಗೆ ತರಲು ಪ್ರಯತ್ನಿಸುತ್ತಿದ್ದರೆ, ಮೆಟ್ರೋ ಕ್ಯಾಶ್ ಆಂಡ್ ಕ್ಯಾರಿ ಬಿಬಿಎಂಪಿ ಈ ನಿಯಮ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದು ವಿಚಾರಣೆ ಮುಂದೂಡಿಕೆಯಾಗಿದೆ. ಇದಕ್ಕೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ಕನ್ನಡ ರಾಜ್ಯದ ಭಾಷೆ. ಮೆಟ್ರೋ ಕ್ಯಾಶ್ ಆಂಡ್ ಕ್ಯಾರಿ ಶಾಪಿಂಗ್ ಕಾಂಪ್ಲೆಕ್ಸ್ಗೆ ಕನ್ನಡ ನಾಮಫಲಕ ಹಾಕುವಂತೆ ನೋಟೀಸ್ ಕೂಡಾ ಕೊಡಲಾಗಿತ್ತು. ಆದ್ರೆ ಅವರು ಕೋರ್ಟ್ಗೆ ಹೋಗಿದ್ದು, ಇದೀಗ ಕೋರ್ಟ್ ಮೆಟ್ರೋ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಸ್ಟೇ ಕೊಟ್ಟಿದೆ. ಹೀಗಾಗಿ ಕೋರ್ಟ್ ಆದೇಶಕ್ಕೆ ಬೆಲೆ ಕೊಡುತ್ತೇವೆ ಎಂದರು.
ಇನ್ನು ಮುಂದಿನ ದಿನಗಳಲ್ಲಿ ಕಾನೂನು ವಿಭಾಗದ ಮೂಲಕ ಹೋರಾಟ ಮಾಡಿ, ಸ್ಟೇ ತೆಗೆಸುವ ಕೆಲಸ ಮಾಡುತ್ತೇವೆ. ಕನ್ನಡ ಉಳಿಸುವ ಕಾನೂನನ್ನು ಇಡೀ ಬೆಂಗಳೂರಲ್ಲಿ ಜಾರಿಗೆ ತರಿಸುವ ಕೆಲಸ ಮಾಡಿಸುತ್ತೇವೆ ಎಂದು ತಿಳಿಸಿದರು.