ಬೆಂಗಳೂರು: ಬಡ ಜನರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಮದ್ಯ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಅಬಕಾರಿ ಸಚಿವ ನಾಗೇಶ್ ತಿಳಿಸಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮದ್ಯ ಸರಬರಾಜು ಮಾಡುವ ಚಿಂತನೆ ಇದೆ. ಗುಣಮಟ್ಟದ ಮದ್ಯ ನೀಡಬೇಕಾಗಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಸರ್ಕಾರ ಇದ್ದಾಗ ಬಡವರಿಗೆ ಕಡಿಮೆ ದರದಲ್ಲಿ ಮದ್ಯ ನೀಡುವ ಬಗ್ಗೆ ಪ್ರಸ್ತಾಪವಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಸಬ್ಸಿಡಿ ದರದಲ್ಲಿ ಮದ್ಯ ನೀಡುವ ಬಗ್ಗೆ ಹಣಕಾಸು ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಈಗಾಗಲೇ 765 ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆಗೆ ಅನುಮತಿ ನೀಡಲಾಗಿದೆ. ಈ ಪೈಕಿ 408 ಮಳಿಗೆಗಳು ಇನ್ನೂ ಪ್ರಾರಂಭವಾಗಿಲ್ಲ. ಒಂದು ಕ್ಷೇತ್ರದಲ್ಲಿ ನಾಲ್ಕು ಮಳಿಗೆಗಳನ್ನು ತೆರೆಯುವ ನಿಯಮ ಇದೆ. ಈ ಬಗ್ಗೆ ಸ್ಥಳೀಯ ಶಾಸಕರು ನಿರ್ಧರಿಸುತ್ತಾರೆ. ಇವುಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಪ್ರಾರಂಭಿಸುವ ಬಗ್ಗೆ ಚಿಂತನೆ ಇದೆ ಎಂದು ವಿವರಿಸಿದರು.
ಬಿಯರ್ ಮಾರಾಟವನ್ನು ಕಡಿಮೆ ಮಾಡಿ ಹಾಟ್ ಲಿಕ್ಕರ್ನ್ನು ಹೆಚ್ಚು ಮಾರಾಟ ಮಾಡುವಂತೆ ಅಬಕಾರಿ ಅಧಿಕಾರಿಗಳು ಮದ್ಯ ಮಾರಾಟಗಾರರ ಮೇಲೆ ಒತ್ತಡ ಹೇರುತ್ತಿರುವ ದೂರುಗಳು ಬಂದಿವೆ. ಈ ಬಗ್ಗೆ ಅಬಕಾರಿ ಆಯುಕ್ತರೊಂದಿಗೆ ಚರ್ಚಿಸಿದ್ದೇನೆ. ಕರಾವಳಿ ಭಾಗದಲ್ಲಿ ಬಿಯರ್ ಮಾರಾಟ ನಿಯಂತ್ರಿಸದಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಸರ್ಕಾರ ರಾಜಸ್ವ ಸಂಗ್ರಹಣೆಗಾಗಿ ನಮಗೆ ಟಾರ್ಗೆಟ್ ನಿಗದಿ ಮಾಡಿದೆ. 20,950 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ಇದೆ. ನವೆಂಬರ್ ವರೆಗೆ ಒಟ್ಟು 14,400 ಕೋಟಿ ರೂ. ರಾಜಸ್ವ ಸಂಗ್ರಹಿಸಿದ್ದೇವೆ. ಡಿಸೆಂಬರ್ ತಿಂಗಳಾಂತ್ಯಕ್ಕೆ ಮತ್ತೆ 1700 ಕೋಟಿ ರೂ. ರಾಜಸ್ವ ಸಂಗ್ರಹ ಮಾಡಲಾಗಿದೆ. ಒಟ್ಟು ಇಲ್ಲಿವರೆಗೆ 16,100 ಕೋಟಿ ರೂ. ರಾಜಸ್ವ ಸಂಗ್ರಹ ಮಾಡಿದ್ದೇವೆ. ಇನ್ನು ಮೂರು ತಿಂಗಳೊಳಗೆ ನಿಗದಿ ಮಾಡಿರುವ ಟಾರ್ಗೆಟ್ ಮುಟ್ಟುತ್ತೇವೆ ಎಂದು ತಿಳಿಸಿದರು.
ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿ 2 ಗಂಟೆಯವರಗೆ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ವೈನ್ ಶಾಪ್ಗಳು ರಾತ್ರಿ 11 ಗಂಟೆ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್ಗಳು ಮಧ್ಯರಾತ್ರಿ 1 ಗಂಟೆಯವರೆಗೆ ತೆರೆದಿರುತ್ತವೆ. ಇದನ್ನು ಇನ್ನೂ ಒಂದು ಗಂಟೆ ಹೆಚ್ಚಿಸಿ ಮಧ್ಯರಾತ್ರಿ 2 ಗಂಟೆವರಗೆ ಅವಕಾಶ ಕೊಡಲು ಗೃಹ ಇಲಾಖೆಯೂ ಸಮ್ಮತಿಸಿದೆ ಎಂದು ಸ್ಪಷ್ಟಪಡಿಸಿದರು.