ಬೆಂಗಳೂರು: 15 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಆಯ್ಕೆ ಹಿನ್ನೆಲೆ ಇಂದು ಸಭೆ ಸೇರಿ ಚರ್ಚಿಸಿದ್ದೇವೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ವೀಕ್ಷಕರ ಸಭೆ ಮುಕ್ತಾಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 8 ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿದ್ದೇವೆ. ಈ ಕ್ಷೇತ್ರಗಳ ಅಭ್ಯರ್ಥಿಗಳ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಉಳಿದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಇಂದು ಚರ್ಚೆಯಾಗಿದ್ದು, ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳನ್ನ ಅಂತಿಮ ಮಾಡುತ್ತೇವೆ ಎಂದರು.
ಇನ್ನು, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ಮಾಜಿ ಶಾಸಕ ರಾಜು ಕಾಗೆ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪಕ್ಷದ ಸಿದ್ಧಾಂತ ಒಪ್ಪಿ ಯಾರು ಬೇಕಾದರೂ ಬರಲಿ, ಅವರಿಗೆ ಸ್ವಾಗತ ಎಂದು ತಿಳಿಸಿದರು. ಟಿಕೆಟ್ ನೀಡುವ ವಿಚಾರವಾಗಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಸಿದ್ದರಾಮಯ್ಯ ಇದೇ ವೇಳೆ ಹೇಳಿದರು.