ಬೆಂಗಳೂರು: ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ, ರಾಜ್ಯದ ಅತ್ಯಂತ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು. ಸಂವಿಧಾನದ 356 ನೇ ಪರಿಚ್ಛೇದದ ಪ್ರಕಾರ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಕರ್ನಾಟಕದ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ನಾನಾ ಇಲಾಖೆಗಳಲ್ಲಿ ಕಮಿಷನ್ ಹಿಂಸೆ ಬಗ್ಗೆ ದೂರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ತಮಗಾಗುತ್ತಿರುವ ನೋವು, ಕಿರುಕುಳ ತಡೆಯಲಾರದೆ ದೂರು ಕೊಟ್ಟಿದ್ದಾರೆ. ಅವರ ನೋವು ನೋಡಿಕೊಂಡು ಸುಮ್ಮನೆ ಕೂರಲು ನಮಗೆ ಸಾಧ್ಯವಿಲ್ಲ ಎಂದರು.
ಭ್ರಷ್ಟ ಅಧಿಕಾರಿಗಳು, ಸಿಬ್ಬಂದಿ ಮೇಲೆ ನಡೆಯುತ್ತಿರುವ ಎಸಿಬಿ ದಾಳಿಯನ್ನು ನಿನ್ನೆ, ಇವತ್ತು ನೋಡಿದ್ದೀರಲ್ಲ... ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿರುವುದಕ್ಕೆ ಇದು ಚಿಕ್ಕ ಸ್ಯಾಂಪಲ್. ಸರ್ಕಾರದ ದುರಾಡಳಿತ, ಭ್ರಷ್ಟಾಚಾರದ ಬಗ್ಗೆ ಹಂತ-ಹಂತವಾಗಿ ಹೋರಾಟ ರೂಪಿಸುತ್ತೇವೆ. ಪಕ್ಷದ ನಾಯಕರ ಜತೆ ಚರ್ಚಿಸಿ, ಈ ಬಗ್ಗೆ ತೀರ್ಮಾನ ಮಾಡುತ್ತೇವೆ. ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಭಾರತದ ಇತಿಹಾಸದಲ್ಲೇ ಕರ್ನಾಟಕಕ್ಕೆ ದೊಡ್ಡ ಕಳಂಕ ಬಂದಿದೆ. ಲೋಕೋಪಯೋಗಿ, ಜಲ ಸಂಪನ್ಮೂಲ, ಸಣ್ಣ ನೀರಾವರಿ, ಬೃಹತ್ ನೀರಾವರಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ನಾನಾ ಇಲಾಖೆಗಳ ಒಂದು ಲಕ್ಷಕ್ಕೂ ಹೆಚ್ಚು ಗುತ್ತಿಗೆದಾರರು ಇದ್ದಾರೆ. ಏನೇ ಕೆಲಸ ಮಾಡಿದರೂ ಅಧಿಕಾರಿಗಳು, ರಾಜಕಾರಣಿಗಳಿಗೆ ಶೇಕಡಾ 40 ರಿಂದ 56 ರಷ್ಟು ಕಮಿಷನ್ ಕೊಡಬೇಕು ಎಂದು ಸಂಘದ ಅಧ್ಯಕ್ಷ ಕೆಂಪಣ್ಣನವರು ಪ್ರಧಾನಿಗೆ ದೂರಿದ್ದಾರೆ. ಮಾಧ್ಯಮಗಳಲ್ಲೂ ಇದು ವರದಿ ಆಗಿದೆ. ಪ್ರಧಾನಿಗಳಿಗೆ ಹೋಗಿರುವ ದೂರಿನ ಪ್ರತಿಯನ್ನು ಪತ್ರ ಸಮೇತ ರಾಜ್ಯಪಾಲರಿಗೆ ನೀಡಿದ್ದೇವೆ. ಈ ಸರ್ಕಾರವನ್ನು ವಜಾ ಮಾಡಬೇಕು. ಗುತ್ತಿಗೆದಾರರ ಸಂಘದ ದೂರಿನ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಬೇಕು ಎಂದು ರಾಜ್ಯಪಾಲರನ್ನು ಒತ್ತಾಯಿಸಿದ್ದೇವೆ ಎಂದರು.
ನಾನಾ ಇಲಾಖೆಯ ಕಾಮಗಾರಿಗಳ ಅಂದಾಜು ವೆಚ್ಚ ಡಬಲ್ ಆಗುತ್ತಿದೆ. 100 ಕೋಟಿ ರುಪಾಯಿ ಕಾಮಗಾರಿಗೆ 200 ಕೋಟಿ ರುಪಾಯಿ ತೋರಿಸಲಾಗುತ್ತಿದೆ. ಅದರ ಬಗ್ಗೆಯೂ ನಮ್ಮ ಬಳಿ ದಾಖಲೆಗಳು ಇವೆ. ಒಂದೆರಡು ದಿನದಲ್ಲೇ ಅವುಗಳನ್ನು ಬಿಡುಗಡೆ ಮಾಡುತ್ತೇವೆ. ಹಿಂದೆ ಯಡಿಯೂರಪ್ಪನವರ ಸರ್ಕಾರ ಇದ್ದಾಗ ಕೆಲವು ಮಂತ್ರಿಗಳು ಅದರಲ್ಲೂ ವಿಶೇಷವಾಗಿ ನೀರಾವರಿ, ಕಾರ್ಪೊರೇಷನ್ ನಲ್ಲಿ ಡಬಲ್, ಡಬಲ್ ಲೆಕ್ಕ ನೀಡಲಾಗಿದೆ. ಯಾವ, ಯಾವ ಇಲಾಖೆಯಲ್ಲಿ ಎಷ್ಟೆಷ್ಟು ವ್ಯವಹಾರ ನಡೆದಿದೆ ಎಂಬುದನ್ನು ದಾಖಲೆ ಸಮೇತ ಸದ್ಯದಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.