ಸೇಡಂ: ಸರ್ವ ಜನಾಂಗಕ್ಕೂ ಸಮಾನ ಹಕ್ಕು ಕೊಟ್ಟ ಮಹಾನ್ ನಾಯಕ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಹೆಸರಿಗೆ ಧಕ್ಕೆ ಬಂದರೆ ಸುಮ್ಮನಿರಲ್ಲ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ ಗುಡುಗಿದರು.
ತಾಲೂಕಿನ ಮಳಖೇಡ ಗ್ರಾಮದ ಅಂಬೇಡ್ಕರ್ ಭವನದಲ್ಲಿ ದಲಿತ ಸೇನೆ ಹಮ್ಮಿಕೊಂಡಿದ್ದ ಮಹಾನಾಯಕ ಧಾರಾವಾಹಿ ಬ್ಯಾನರ್ ಉದ್ಘಾಟನೆ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಪ್ರತಿಯೊಂದು ಜನಾಂಗಕ್ಕೆ ಸಮಾನ ಮತ್ತು ಶಾಶ್ವತ ಪರಿಹಾರ ಕೊಟ್ಟು, ತಿರಸ್ಕಾರದ ನಂತರವೂ ಶಿಕ್ಷಣದ ಮೂಲಕ ಸಾಧನೆ ಮಾಡಿದ ಮಹಾನ್ ನಾಯಕ ಡಾ. ಅಂಬೇಡ್ಕರ್. ಅವರು, ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಹಕ್ಕು ನೀಡಿ, ಬದುಕುವ ದಾರಿ ತೋರಿದ್ದಾರೆ. ಅಂಬೇಡ್ಕರ್ ತಂದ ಸಮಾನತೆಯ ರಥವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಇಂದಿನ ಮಕ್ಕಳು ತಮ್ಮ ಹೀರೊಗಳನ್ನು ಸಿನಿಮಾಗಳಲ್ಲಿ ಕಾಣುತ್ತಿದ್ದಾರೆ. ನಿಜವಾದ ಹೀರೊ ಇತಿಹಾಸದ ಪುಟಗಳಲ್ಲಿದ್ದಾರೆ. ಅಂತವರನ್ನು ಅರಿತುಕೊಂಡರೆ ಪ್ರತಿ ಮನೆಯಲ್ಲೂ ಮಹಾನಾಯಕ ಹುಟ್ಟುತ್ತಾನೆ ಎಂದರು.
ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಮಾತನಾಡಿ, ದೇಶದಲ್ಲಿ ರಾಮರಾಜ್ಯ ಕಟ್ಟಲು ಕೆಲವರು ಹೊರಟರೆ ಅದು ಸಫಲವಾಗಲ್ಲ. ನಾವು ಭೀಮರಾಜ್ಯ ಕಟ್ಟುತ್ತೇವೆ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರಗಳನ್ನು ತಡೆಯುವಲ್ಲಿ ಅಲ್ಲಿನ ಯೋಗಿ ಸರ್ಕಾರ ವಿಫಲವಾಗಿದೆ. ಅಮಾನುಷವಾಗಿ ಮಹಿಳೆಯರನ್ನು ಯುಪಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ದಲಿತರ ಮತ್ತು ಹಿಂದುಳಿದವರ ಮೇಲಿನ ದೌರ್ಜನ್ಯಗಳನ್ನು ನಾವು ಯಾವತ್ತೂ ಸಹಿಸಲ್ಲ ಎಂದು ಹೇಳಿದರು.