ಬೆಂಗಳೂರು: ಭಾರತ ಸಂವಿಧಾನದ ಪುಸ್ತಕವನ್ನು ಜಾನಪದ ರೂಪದ ಹಾಡಾಗಿ ಪರಿವರ್ತಿಸಿ ಹಾಡಿಸಬೇಕಿದೆ. ಇದಕ್ಕೆ ನಾವು 20 ಸಾಹಿತಿಗಳು ರಾಗ ಸಂಯೋಜನೆ ಮಾಡುತ್ತೇವೆ. ನಾವೇ ಸಂವಿಧಾನದ ವಿಚಾರವನ್ನು ಹಾಡಿನ ರೂಪಕ್ಕೆ ತರುತ್ತೇವೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ತಿಳಿಸಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ರಚಿತ ಮೀಸಲಾತಿ ಕುರಿತಾದ ಭ್ರಮೆ ಮತ್ತು ವಾಸ್ತವ ಕೃತಿಯ ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಹಂಸಲೇಖ ಅವರು, ನನ್ನದು ಚಿಕ್ಕ ಬಾಯಿ ಆದರೆ ನಾನು ಇಲ್ಲಿ ದೊಡ್ಡ ದೊಡ್ಡ ಮಾತನಾಡಬೇಕಿದೆ. ಪ್ರತಿಭೆ ಅಂದರೆ ಏನು, ಯಾರು ಅಂತ ಕೇಳುತ್ತಿದ್ದರು. ಈಗ ಹೇಳುತ್ತೇನೆ ಕೇಳಿ - ಪ್ರತಿಭೆ ಅಂದರೆ ನಾನೇ, ನಾನು ಒರಿಜಿನಲ್ ಪ್ರತಿಭೆ ಎಂದರು.
ಅಂದು ಬುದ್ಧ, ಬಸವ, ಅಂಬೇಡ್ಕರ್ ಇಂದು ನಾಗಮೋಹನ್ ದಾಸ್. ನಮ್ಮ ಕೈಯಲ್ಲಿದ್ದ ಬಾಗಿಲಿನ ಕೀಯನ್ನು ಬೇರೆಯವರಿಗೆ ಕೊಟ್ಟಿದ್ದೇವೆ. ಅದು ಬದಲಾಗಬೇಕು. ನಾಗಮೋಹನ್ ದಾಸ್ ಅವರ ಮೀಸಲಾತಿ ಪುಸ್ತಕ ಇಂದು ಅತ್ಯವಶ್ಯಕ. ಈ ಪುಸ್ತಕವನ್ನು ಒಂದು ಕಾವ್ಯವಾಗಿ ಕಾಪಾಡಬೇಕು, ಮುಂದೆ ನಮಗೆ ಅಪಾಯ ಕಾದಿದೆ. ಹಾಗಾಗಿ ನಾವು ಹಾಡಬೇಕಿರುವುದು ಹರಿಕಥೆ, ಗಿರಿಕಥೆಯಲ್ಲ. ಕಾನೂನಿನ ಹಾಡು ಹಾಡಬೇಕಿದೆ. ಸಂವಿಧಾನದ ಪುಸ್ತಕದ ಅಂಶವನ್ನು ಜಾನಪದ ರೂಪದ ಹಾಡಾಗಿ ಹಾಡಿಸಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: ನಾಳೆಯಿಂದ ಜುಲೈ 4ರ ವರೆಗೆ SSLC ಪೂರಕ ಪರೀಕ್ಷೆ
ಸರ್ಕಾರ ಕೊಡುವ ಮೀಸಲಾತಿ ಬೇರೆ, ಸಮಾಜ ಕೊಡುವ ಮೀಸಲಾತಿ ಬೇರೆ. ಹಂಗಿಲ್ಲದ ಮೀಸಲಾತಿ ಈ ಸಮಾಜಕ್ಕೆ ಬೇಕಿದೆ. ನಾನು ಮೂರು ಸಾವಿರ ಹಾಡುಗಳನ್ನು ಬರೆದಿದ್ದೇನೆ. ಆದರೂ ನಾನು ಓದಿದ್ದೇನೆ ಎಂದು ಹೇಳೋದಿಲ್ಲ. ಸಮಾಜದಲ್ಲಿ ಮೂರೇ ವರ್ಗ ಇರೋದು ಒಂದು ಅಗ್ರ, ಮತ್ತೊಂದು ಉಗ್ರ, ನಾವೂ ಸಮಗ್ರ ಎಂದು ಹೇಳಿ ಹಂಸಲೇಖ ಭಾಷಣ ಮುಗಿಸಿದರು.