ಬೆಂಗಳೂರು: ನಾವೇನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರಲಿಲ್ಲ. ನಮಗೆ ಹೇಳದೆ, ಕೇಳದೇ ಅವರೇ ತೆಗೆದರು. ಭಾರತೀಯ ಜನತಾ ಪಕ್ಷಕ್ಕೆ ವಿಧಿ ಇಲ್ಲದೆ ಸೇರಿದ್ದೀವೆ ಎಂದು ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ವೇಳೆ ಮಾತನಾಡಿದ ಅವರು, ಬದಲಾವಣೆಯನ್ನು ಕಾಂಗ್ರೆಸ್ನವರೇ ಮಾಡಿದ್ದು, ಯಶವಂತಪುರದ ಬಿಜೆಪಿ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಶೇ.70 ಜನ ನಮಗೆ ಬೆಂಬಲ ನೀಡಿದ್ದಾರೆ. ಇಲ್ಲಿ ಸ್ವಾಭಿಮಾನದ ಪ್ರಶ್ನೆ ಇಲ್ಲ. ನಾನು ನನ್ನ ಕ್ಷೇತ್ರ ಬಿಟ್ಟಿಲ್ಲ ಎಂದು ತಿಳಿಸಿದರು.
ಜೆಡಿಎಸ್ನವರು ಚುನಾವಣೆ ಬಂದಾಗ ಕಾಣಿಸಿಕೊಳ್ಳುತ್ತಾರೆ. ಕಾಂಗ್ರೆಸ್ನವರು ಯಾರೋ ಬಿಲ್ಡರನ್ನು ಕಣದಲ್ಲಿ ನಿಲ್ಲಿಸಿದ್ದಾರೆ. ಅವರ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳೋದಕ್ಕೆ ಒಂದು ವರ್ಷ ಬೇಕು ಎಂದು ಕಿಡಿಕಾರಿದರು.
ನಾನು ಹೆಸರು ಬದಲಾವಣೆ ಮಾಡಿಲ್ಲ. ನನ್ನ ಹೆಸರು ಎಸ್.ಟಿ.ಸೋಮಶೇಖರ್ ಅಂತಾನೇ ಇರುವುದು. 2008ರಲ್ಲಿ ಎಸ್.ಟಿ.ಸೋಮಶೇಖರ್ ಅನ್ನೋದನ್ನು ಶೆಡ್ಯೂಲ್ ಟ್ರೈಬ್ ಅಂತಾ ಬಿಜೆಪಿ ಅವರು ಬಿಂಬಿಸಿದ್ದರು. ಆಗಿನಿಂದ ಅಭಿಮಾನಿಗಳು ಬ್ಯಾನರ್ಗಳಲ್ಲಿ ಸೋಮಶೇಖರ್ ಗೌಡ ಅಂತಾ ಹಾಕುತ್ತಿದ್ದರು. ಕೇವಲ ಒಂದು ಜಾತಿಯಿಂದ ಗೆಲ್ಲೋದಕ್ಕೆ ಆಗೋಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಲೇಔಟ್ ಕೃಷ್ಣಪ್ಪ ಅವರಿಗೆ ಟಾಂಗ್ ನೀಡಿದ ಎಸ್.ಟಿ.ಸೋಮಶೇಖರ್, ಲೇಔಟ್ ಕೃಷ್ಣಪ್ಪ ಅಂತಾ ಅವರ ತಾತ ಹೆಸರಿಟ್ಟಿದ್ರಾ? ಎಲ್ಲ ಕಡೆ ಲೇಔಟ್ ಕೃಷ್ಣಪ್ಪ ಎಂದು ಹೇಳಿಕೊಳ್ಳುತ್ತಾರೆ. ಏನು ಅದು ಲೇಔಟ್, ನಮ್ಮ ಅಪ್ಪ ಅಮ್ಮ ನನಗೆ ಎಸ್.ಟಿ. ಸೋಮಶೇಖರ್ ಎಂದು ಹೆಸರಿಟ್ಟಿದ್ದಾರೆ. ನನ್ನ ಆಫಿಡವಿಟ್ನಲ್ಲೂ ಅದೇ ಹೆಸರಿದೆ ಎಂದು ಸ್ಪಷ್ಟಪಡಿಸಿದರು.