ಬೆಂಗಳೂರು: ಬಿಜೆಪಿ ದೂರ ಇಡೋಕೆ ನಾವು ಪ್ರಯತ್ನ ಮಾಡ್ತಾ ಇದ್ದೇವೆ. ಜೆಡಿಎಸ್ ನಿಂದ ಮಾತ್ರ ಬರ್ತಾ ಇದ್ದಾರೆ ಅಂತಲ್ಲ. ನಮ್ಮನ್ನು ಒಪ್ಪಿ ಯಾರೇ ಪಕ್ಷಕ್ಕೆ ಬಂದ್ರು ಸ್ವಾಗತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಪಕ್ಷ ಸೇರ್ಪಡೆ ಸಂಬಂಧ ಸದಾ ಶಿವನಗರದ ತಮ್ಮ ನಿವಾಸಕ್ಕೆ ಭೇಟಿ ನೀಡಿದ ಮಧು ಬಂಗಾರಪ್ಪ ಜೊತೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ನಾವು ಒಂದು ಕರೆ ಕೊಟ್ಟಿದ್ವಿ. ನಮ್ಮ ಸಿದ್ದಾಂತ ಒಪ್ಪಿ ಬನ್ನಿ ಅಂತ. ಆ ನಿಟ್ಟಿನಲ್ಲಿ ಕಾಂಗ್ರೆಸ್ಗೆ ನಾಯಕರು ಬರ್ತಾ ಇದ್ದಾರೆ. ನನ್ನ ರಾಜಕಾರಣದ ವಿದ್ಯಾರ್ಥಿ ಘಟಕದಿಂದ ಬಂಗಾರಪ್ಪ ಬೆಂಬಲವಾಗಿದ್ರು. ನನ್ನನ್ನು ಬೆಳೆಸಿದ ಧೀಮಂತ ನಾಯಕ. ಅವರಿಗೆ ಯುವಕರನ್ನು ಬರ ಸೆಳೆಯುವ ಶಕ್ತಿ ಇತ್ತು. ನನ್ನಂತ ಅನೇಕ ಜನರನ್ನ ಬಂಗಾರಪ್ಪ ಬೆಳೆಸಿದ್ದಾರೆ. ಕಾಂಗ್ರೆಸ್ ಕಟ್ಟುವಲ್ಲಿ ಬಂಗಾರಪ್ಪ ಪ್ರಮುಖರು ಎಂದು ತಿಳಿಸಿದರು.
ಅನೇಕ ಕಾರಣಗಳಿಂದ ಪಕ್ಷ ತೊರೆದು ಹೋಗಿದ್ದರು. ಅವರ ಮಗ ಮಧು ಬಂಗಾರಪ್ಪರನ್ನು ಸೆಳೆಯುವ ಕೆಲಸ ಮಾಡ್ತಾ ಇದ್ದೆವು. ಆದರೆ, ಒಳ್ಳೆಯ ಸಮಯಕ್ಕೆ ಕಾಯ್ತಾ ಇದ್ರು. ಅವರ ಹುಟ್ಟೆ ಕಾಂಗ್ರೆಸ್, ಬ್ಲಡ್ ಕೂಡ ಕಾಂಗ್ರೆಸ್. ಎಐಸಿಸಿಯಿಂದ ಸೂಚನೆ ಬಂತು ಪಕ್ಷ ಸೇರ್ತಾರೆ ಅಂತ. ಬಂಗಾರಪ್ಪ ಅವರಿಗೆ ಅನೇಕ ಅಭಿಮಾನಿ ಬಳಗ ಇದೆ. ಅವರ ಅಭಿಪ್ರಾಯ ಪಡೆದು ಕಾಂಗ್ರೆಸ್ ಸೇರ್ತಾ ಇದ್ದಾರೆ. ಕಾಗೋಡು, ಜನಾರ್ದನ್ ಪೂಜಾರಿ, ಬಂಗಾರಪ್ಪ ಅಂತವರ ಕೊಡುಗೆ ಮರೆಯುವ ಹಾಗಿಲ್ಲ. ಇವತ್ತು ನಮ್ಮ ಪಕ್ಷ ಸೇರೋಕೆ ಬಂದಿದ್ದಾರೆ. ಅವರಿಗೆ ಕಾಂಗ್ರೆಸ್ ಗೆ ಸ್ವಾಗತ ಮಾಡುತ್ತೇವೆ. ಯಾವ ರೀತಿ ಕಾರ್ಯಕ್ರಮ ಮಾಡಿ ಕಾಂಗ್ರೆಸ್ ಸೇರಿಸಿಕೊಳ್ಳಬೇಕು ಅಂತ ತೀರ್ಮಾನ ಮಾಡುತ್ತೇವೆ ಎಂದರು.
ಸಿಡಿ ಪ್ರಕರಣ ಸಂಬಂಧ ಆಂತರಿಕ ಚರ್ಚೆ: ಸಿ.ಡಿ. ಪ್ರಕರಣ ಸಂಬಂಧ ನಾವೆಲ್ಲ ಪಕ್ಷದ ನಾಯಕರು ಕುಳಿತು ಚರ್ಚೆ ನಡೆಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು. ಎಸ್ ಐಟಿ ರಚನೆ ಮಾಡಲಿ, ನೋಡೋಣ. ನಾವೆಲ್ಲ ಪಕ್ಷದ ನಾಯಕರು ಕುಳಿತು ಚರ್ಚೆ ಮಾಡ್ತೇವೆ. ಕೆಲ ನಾಯಕರು ನಮ್ಮ ಪಕ್ಷದ ಹೆಸರು, ನಮ್ಮ ಹೆಸರು ತಗೊಂಡಿದ್ದಾರೆ. ತನಿಖೆ ನಡೆಯಲಿ ಎಲ್ಲವೂ ಗೊತ್ತಾಗುತ್ತದೆ ಎಂದರು.
ಅದು ಸಲಿಯೋ ನಕಲಿಯೋ, ಅದರಲ್ಲಿರುವುದು ರಮೇಶ್ ಜಾರಕಿಹೊಳಿಯೋ?, ಹನಿಟ್ರ್ಯಾಪಾ?, ಕನ್ನಡಿಗರು, ಯಡಿಯೂರಪ್ಪ ಭ್ರಷ್ಟ ಸಿಎಂ, ಬೆಳಗಾವಿ ಪತ್ಯೇಕ ರಾಜ್ಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಂಭಾಷಣೆ ಮಾಡಿರುವುದು ಸಿಡಿಯಲ್ಲಿದೆ. ಇದೆಲ್ಲವೂ ತನಿಖೆಯ ಬಳಿಕ ಗೊತ್ತಾಗಲಿದೆ ಎಂದರು.
ಗೀತಾ ಶಿವಕುಮಾರ್ ಕೂಡ ಕಾಂಗ್ರೆಸ್ ಸೇರುತ್ತಾರೆ: ನಾನು ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತಿದ್ದೇನೆ. ಅಕ್ಕ ಗೀತಾ ಶಿವಕುಮಾರ್ ಅವರು ಕೂಡ ಕಾಂಗ್ರೆಸ್ಗೆ ಬರುತ್ತಾರೆ ಎಂದು ಇದೇ ವೇಳೆ ಮಧು ಬಂಗಾರಪ್ಪ ತಿಳಿಸಿದರು.
ಮಾತುಕತೆ ಈಗಾಗಲೇ ಆಗಿದೆ, ಅವರು ಕೂಡ ಕಾಂಗ್ರೆಸ್ಗೆ ಬರುತ್ತಾರೆ. ನಾನು ವಿರೋಧ ಪಕ್ಷದಲ್ಲಿ ಇದ್ದಾಗ ಕೂಡ ಬೇಧ ಬಾವ ಮಾಡಿಲ್ಲ. ಡಿಕೆಶಿ ನನಗೆ ಅಣ್ಣನ ತರಹ ಸಂಪೂರ್ಣ ಸಹಕಾರ ಕೋಟ್ಟಿದ್ದಾರೆ. ಡಿಕೆಶಿ ಅವರು ಬಂಗಾರಪ್ಪ ಅನುಯಾಯಿ. ಹೀಗಾಗಿ ಈಗ ಕಾಂಗ್ರೆಸ್ ಸೇರುತ್ತಾ ಇದ್ದೇನೆ. ಈಗಿನಿಂದ ನಾನು ಕಾಂಗ್ರೆಸ್ಸಿಗ, ಅಧಿಕೃತ ಆಮೇಲೆ ಆಗುತ್ತೇನೆ. ಇವತ್ತು ಕಾಂಗ್ರೆಸ್ ಅವಶ್ಯಕತೆ ದೇಶಕ್ಕೆ, ರಾಜ್ಯಕ್ಕೆ ಇದೆ ಎಂದರು. ಈ ಹಿಂದೆ ನಡೆದ ಘಟನೆ ಬಗ್ಗೆ ಈಗ ಮಾತನಾಡಲ್ಲ. ಜೆಡಿಎಸ್ ಬಿಟ್ಟ ಬಗ್ಗೆ ಕೂಡ ಮಾತನಾಡಲ್ಲ. ಕುಮಾರಸ್ವಾಮಿ ಏನೇ ಅಂದ್ರು, ಅವರ ಬಗ್ಗೆ ಗೌರವಿದೆ ಎಂದರು.