ಬೆಂಗಳೂರು: ವೃಷಭಾವತಿ ನದಿ ಇಂದು ಕೊಳಚೆ ಕಾಲುವೆಯಾಗಿ ವಿಷಭಾವತಿಯಾಗುತ್ತಿದೆ.
ಹೌದು, ಅಂದಿನ ವೃಷಭಾವತಿ ನದಿ ಇಂದು ಕೆಂಗೇರಿ ಮೋರಿಯಾಗಿ ಪರಿಣಮಿಸಿದ್ದು, ಇದೀಗ ವಿಷ ಹರಿಯುವ ಚರಂಡಿಯಾಗಿದೆ. ನಗರದಲ್ಲಿರುವ ಡೈಯಿಂಗ್ ಕಾರ್ಖಾನೆಗಳ ವಿಷಯುಕ್ತ ನೀರು ನದಿಗೆ ಸೇರುತ್ತಿದೆ. ರಾತ್ರೋರಾತ್ರಿ ಆರೇಳು ಟ್ಯಾಂಕರ್ಗಳಲ್ಲಿ ವಿಷ ದ್ರಾವಣವನ್ನು ತಂದು ನದಿಗೆ ಹರಿಬಿಡಲಾಗುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಪ್ರವೇಶದ್ವಾರದಲ್ಲಿರುವ ನದಿಯ ಜಾಡಿಗೆ ದೊಡ್ಡ ಪೈಪ್ ಮೂಲಕ ವಿಷವನ್ನು ಹರಿಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಮುಂಜಾನೆ ಬಂದ ಟ್ಯಾಂಕರ್ಅನ್ನು ಹಿಂಬಾಲಿಸಿದ್ದ ಭೀಮಪುತ್ರಿ ಬ್ರಿಗೇಡ್ ಸಂಘಟನೆ, ಲಾರಿಯನ್ನು ಅನಾಮತ್ತಾಗಿ ಹಿಡಿದು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಒಪ್ಪಿಸಿದೆ. ಅದರೆ, ಈ ವೇಳೆ ಚಾಲಕ ಪರಾರಿಯಾಗಿದ್ದು, ಲಾರಿಗೆ ಸಂಬಂಧಪಟ್ಟ ವ್ಯಕ್ತಿಯೋರ್ವ ಪೊಲೀಸ್ ಠಾಣೆ ಸುಪರ್ದಿಗೆ ಅರೆಸ್ಟ್ ಆಗಿದ್ದ. ಆದರೆ, ಸ್ವಲ್ಪ ಸಮಯದಲ್ಲೇ ಆತನಿಗೂ ಸ್ಟೇಷನ್ ಬೇಲ್ ನೀಡಿ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ.
ಇನ್ನು ಈ ಕೃತ್ಯಕ್ಕೆ ಆಡಳಿತಾರೂಢ ಸ್ಥಳೀಯರ ಕುಮ್ಮಕ್ಕು ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇನ್ನು ಪೊಲೀಸರು ಇವನ್ನೆಲ್ಲಾ ನೋಡಿಯೂ ನೋಡದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕ್ರಮ ಕಯಗೊಳ್ಳದೇ ಇದ್ದರೆ ವೃಷಭಾವತಿ ಇನ್ನಷ್ಟು ವಿಷಭಾವತಿಯಾಗಿ ಕಾವೇರಿ ಒಡಲು ಸೇರುವುದು ಖಚಿತ.