ಬೆಂಗಳೂರು: ವೋಚರ್ಗಳನ್ನು ಸರಕು ಮತ್ತು ಸೇವೆಗಳ ಕಾಯಿದೆಯಡಿಯಲ್ಲಿ ಸೇರಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಬೆಂಗಳೂರಿನ ಪ್ರೀಮಿಯರ್ ಸೇಲ್ಸ್ ಪ್ರಮೋಷನ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ದಿನೇಶ್ ಕುಮಾರ್ ಮತ್ತು ಟಿ.ಜಿ.ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ವೋಚರ್ ನೀಡುವುದು ಮತ್ತು ಪೂರೈಕೆ ಮಾಡುವುದು ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್ಟಿ) ಅನ್ವಯಿಸುವುದಿಲ್ಲ. ಗಿಫ್ಟ್ ಮತ್ತು ಕ್ಯಾಷ್ ಬ್ಯಾಕ್ ವೋಚರ್ಗಳು ಸೇರಿದಂತೆ ವೋಚರ್ಗಳು ಸಾಧನಗಳಾಗಿದ್ದು, ಸರಕು ಮತ್ತು ಸೇವೆಗಳ ಪರಿಗಣನೆಗೆ ಅವುಗಳನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯಿದೆ (ಸಿಜಿಎಸ್ಟಿ) ಅಡಿ ವೋಚರ್ಗಳು ಹಣದ ವಿಭಾಗದಲ್ಲಿ ಬಂದರೂ ಅವುಗಳನ್ನು ಕಾಯಿದೆಯ ಸರಕು ಮತ್ತು ಸೇವಾ ಕಾಯಿದೆಯ ವ್ಯಾಖ್ಯಾನದಿಂದ ಹೊರಗಿರಿಸಲಾಗಿದೆ.
ಅರ್ಜಿದಾರ ಸಂಸ್ಥೆಯು ಗಿಫ್ಟ್ ವೋಚರ್ಗಳು, ಕ್ಯಾಷ್ ಬ್ಯಾಕ್ ವೋಚರ್ಗಳು ಮತ್ತು ಇ-ವೋಚರ್ ಸೇರಿದಂತೆ ಪ್ರೀಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್ (ಪಿಪಿಐ) ಅನ್ನು ವಿತರಕರಿಂದ ಪಡೆದು ಅದನ್ನು ತನ್ನ ಗ್ರಾಹರಕರಿಗೆ ಪೂರೈಸುತ್ತದೆ. ಅರ್ಜಿದಾರ ಸಂಸ್ಥೆಯು ಪ್ರಚಾರ ಯೋಜನೆಯ ಭಾಗವಾಗಿ ತನ್ನ ಉದ್ಯೋಗಿಗಳಿಗೆ ಉತ್ತೇಜನೆಯ ಭಾಗವಾಗಿ ವೋಚರ್ಗಳನ್ನು ನೀಡುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಭಾರತೀಯ ರಿಸರ್ವ್ ಬ್ಯಾಂಕ್ ವೋಚರ್ಗಳನ್ನು ʼಪಾವತಿ ಸಾಧನʼ ಎಂದು ಪರಿಗಣಿಸಿದೆ. ಸರಕು ಮತ್ತು ಸೇವಾ ಪೂರೈಕೆಗೆ ಅದನ್ನು ಬಳಸಬಹುದಾಗಿದೆ. ಆದರೆ, ಜಿಎಸ್ಟಿ ವಿಧಿಸಿಲು ವೋಚರ್ಗಳನ್ನೇ ಸರಕು ಮತ್ತು ಸೇವೆಗಳು ಎಂದು ಪರಿಗಣಿಸಲು ಅವಾಕಾಶವಿಲ್ಲ ಎಂದು ವಾದಿಸಿದ್ದರು.
ಪ್ರಕರಣದ ಹಿನ್ನೆಲೆ: ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯಿದೆ (ಸಿಜಿಎಸ್ಟಿ ಕಾಯಿದೆ) ಸೆಕ್ಷನ್ 12(5)ರ ಅಡಿ ಅರ್ಜಿದಾರ ಸಂಸ್ಥೆಯು ಪೂರೈಸುವ ವೋಚರ್ಗಳನ್ನು ಸರಕು ಎಂದು ಪರಿಗಣಿಸಿ ತೆರಿಗೆ ವಿಧಿಸಿತ್ತು. ಇದನ್ನು ಅರ್ಜಿದಾರರ ಸಂಸ್ಥೆ ಕರ್ನಾಟಕ ಅಡ್ವಾನ್ಸ್ ರೂಲಿಂಗ್ ಪ್ರಾಧಿಕಾರವು (ಎಎಆರ್) ಪ್ರಶ್ನಿಸಿತ್ತು. ವಿಚಾರಣೆ ನಡೆಸಿದ್ದ ಎಎಆರ್ ಎತ್ತಿಹಿಡಿದಿತ್ತು. ಈ ಆದೇಶವನ್ನು ಅರ್ಜಿದಾರ ಸಂಸ್ಥೆ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಇದೀಗ ಹೈಕೋರ್ಟ್ ವೋಚರ್ಗಳು ಜಿಎಸ್ಟಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೀಠ ಆದೇಶಿಸಿದೆ.
ಇದನ್ನೂ ಓದಿ: ತಮಿಳುನಾಡು ಬೇಟೆಗಾರರು ರಾಜ್ಯದ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ