ಬೆಂಗಳೂರು: ಕಳೆದ ಎರಡು ವರ್ಷದಲ್ಲಿ ನಡೆದ ಮೂರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೂರು ಬಾರಿಯೂ ಕಾಂಗ್ರೆಸ್ ಅಗ್ರಸ್ಥಾನ ಕಾಯ್ದುಕೊಂಡಿದೆ. ಮೂರನೇ ಬಾರಿ ನಮ್ಮ ಕೈಹಿಡಿದ ಹಿಡಿದ ಮತದಾರರಿಗೆ ಧನ್ಯವಾದಗಳು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಅವರು, ಹಿಂದೆ ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ನಡೆದ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದೆವು. ಈಗ ನಾವು ಪ್ರತಿಪಕ್ಷದ ಸ್ಥಾನದಲ್ಲಿದ್ದರೂ 418 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿದೆ. 151 ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರೇ ಬಿಜೆಪಿಯವರು 125 ಹಾಗೂ ಜೆಡಿಎಸ್ 63 ಕ್ಷೇತ್ರಗಳಲ್ಲಿ ಮಾತ್ರ ಜಯ ಗಳಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಬೇರು ಬಲವಾಗಿದೆ ಎಂಬ ಸಂದೇಶ ಸಿಕ್ಕಿದೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಒಟ್ಟು 418 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಫಲಿತಾಂಶದಲ್ಲಿ ನಾವೇ ನಂಬರ್ ಒನ್ ಸ್ಥಾನದಲ್ಲಿ ಇದ್ದೇವೆ. ಬಿಜೆಪಿಯವರು ಮೊದಲಿನಿಂದಲೂ ಹೇಳುತ್ತಿದ್ದರು, 'ನಗರ ಪ್ರದೇಶದಲ್ಲಿ ನಮಗೇ ಜನ ಕೈ ಹಿಡಿಯುತ್ತಾರೆ' ಎಂದು. ಆದರೆ, ನಗರ ಪ್ರದೇಶ ಸೇರಿದಂತೆ 14 ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ಗೆ ಗೆಲುವು ಲಭ್ಯವಾಗಿದೆ. ಗೆಲುವು ತಂದುಕೊಟ್ಟ ಎಲ್ಲಾ ಮತದಾರರಿಗೂ ಹಾಗೂ ಗೆದ್ದವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.