ಬೆಂಗಳೂರು: ದಿವಂಗತ ಅನಂತಕುಮಾರ್ ಪುತ್ರಿ ಬಿಜೆಪಿ ಸರ್ಕಾರ ಮತ್ತು ಪಕ್ಷದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕಾಗಿ ದುಡಿದ ತಂದೆಯನ್ನು ಬಿಜೆಪಿ ಮರೆತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ವಿಜೇತ ಅನಂತಕುಮಾರ್, ಬೆಂಗಳೂರು ನಗರದ ಪ್ರಮುಖ ರಸ್ತೆಗಳಿಗೆ, ವೃತ್ತಗಳಿಗೆ ತಂದೆ ಹೆಸರಿಡಲು ಮರೆತ ಸರ್ಕಾರದ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಆ ಮೂಲಕ ತಂದೆಯ ಕೊಡುಗೆಯನ್ನು ಬಿಜೆಪಿ ಮರೆತಿದೆ ಎಂದು ಕಿಡಿಕಾರಿದ್ದಾರೆ. 1987ಕ್ಕೆ ಅನಂತಕುಮಾರ್ ಬಿಜೆಪಿ ಸೇರಿದ್ದರು.
ತಮ್ಮ ಕೊನೆ ಉಸಿರು ಇರುವವರೆಗೆ ಪಕ್ಷಕ್ಕೆ ದುಡಿದಿದ್ದಾರೆ - ವಿಜೇತ: ಅವರು ತಮ್ಮ ಕೊನೆ ಉಸಿರು ಇರುವವರೆಗೆ ಪಕ್ಷಕ್ಕೆ ದುಡಿದಿದ್ದಾರೆ. ಲಕ್ಷಾಂತರ ಕಾರ್ಯಕರ್ತರ ಹೃದಯದಲ್ಲಿ ತಂದೆ ಜೀವಂತರಾಗಿದ್ದಾರೆ. ಪಕ್ಷಕ್ಕಾಗಿ ದುಡಿದ ತಂದೆಯನ್ನು ಮರೆತ ಬಿಜೆಪಿ ಆತ್ಮಾವಲೋಕನ ಮಾಡಬೇಕಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಅನಂತಕುಮಾರ್ ಪುತ್ರಿ ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿದ್ದು, ತಮ್ಮ ತಂದೆಯ ಕೊಡುಗೆಯನ್ನು ಮರೆಯುತ್ತಿರುವ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಕಾರ್ಯಕ್ರಮಗಳಿಗೆ, ರಸ್ತೆಗಳು, ವೃತ್ತಗಳಿಗೆ ತಂದೆ ಹೆಸರನ್ನು ಇಡದೇ ಇರುವ ವಿಚಾರ ಕ್ಷುಲ್ಲಕ ಸಂಗತಿಯಾಗಿದೆ. ನನ್ನ ತಂದೆ ಲಕ್ಷಾಂತರ ಜನರ ಹೃದಯದಲ್ಲಿ ಜೀವಂತರಾಗಿದ್ದಾರೆ ಎಂದು ವಿಜೇತ ಅನಂತಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ:ದೇವರು ಭೂಮಿಗೆ ಕಳುಹಿಸಿದ್ದ ದೇವರ ಮಗ ಅಂಬರೀಶ್: ಅಂಬಿ ನೆನೆದು ಕಣ್ಣೀರು ಹಾಕಿದ ಸುಮಲತಾ
ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರು ಮರುನಾಮಕರಣ: ಸೋಮವಾರ ಮೌರ್ಯ ಸರ್ಕಲ್ ನಿಂದ ಬಸವೇಶ್ವರ ಸರ್ಕಲ್ ವರೆಗಿನ ರೇಸ್ ಕೋರ್ಸ್ ರಸ್ತೆಗೆ ರೆಬೆಲ್ ಸ್ಟಾರ್ ಡಾ. ಎಂ.ಹೆಚ್ ಅಂಬರೀಶ್ ರಸ್ತೆ ಎಂದು ನಾಮಕರಣ ಮಾಡಿ ಸಿ.ಎಂ ಬಸವರಾಜ ಬೊಮ್ಮಾಯಿ ನಾಮಫಲಕ ಅನಾವರಣಗೊಳಿಸಿದ್ದರು.
ನಂತರ ಮಾತನಾಡಿದ್ದ ಅವರು, ನೆರ ದಿಟ್ಟ ನಿರಂತರ ಎಂಬಂತೆ ರೆಬೆಲ್ ಸ್ಟಾರ್ ಅಂಬರೀಶ್ ಆಗಿದ್ದರು. ಕರ್ನಾಟಕ ಜನರ ಮನಸ್ಸನ್ನು ಗೆದ್ದಂತಹ ನಟರಾಗಿದ್ದರು. ಅವರ ನೆನಪಿಗಾಗಿ ರೇಸ್ ಕೋರ್ಸ್ ರಸ್ತೆಯನ್ನು ಡಾ ಅಂಬರೀಶ್ ರಸ್ತೆಯನ್ನಾಗಿ ಸಂತೋಷದಿಂದ, ಅಭಿಮಾನಿಗಳ ಒತ್ತಾಸೆಯಿಂದ ಮರುನಾಮಕರಣ ಮಾಡಿದ್ದೇನೆ. ಅವರ ಕಾರ್ಯಕ್ಷೇತ್ರಗಳು ಹತ್ತಿರ ಇರುವ ಸ್ಥಳ ಇದಾಗಿದೆ. ಆದ್ದರಿಂದ ಈ ರಸ್ತೆಯ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದ್ದರು.
ಅಂಬರೀಶ್ ಅವರದ್ದು ಅದ್ಭುತವಾದ ಅಭಿನಯ, ಸಹಜವಾಗಿ ನಟಿಸುತ್ತಿದ್ದರು. ಜನರ ಮನಸ್ಸು ಸೆಳೆಯುವ ವ್ಯಕ್ತಿತ್ವ. ನೇರವಾಗಿ ಸತ್ಯವನ್ನು ಮಾತನಾಡುವರು ಅವರಾಗಿದ್ದರು. ನಾಯಕತ್ವ ಗುಣಗಳಿರುವ ವ್ಯಕ್ತಿಯಾಗಿದ್ದರು. ಸಿನಿಮಾದ ಪರದೆಯ ಮೇಲೆ ಹೇಗಿದ್ದಾರೋ ನಿಜ ಜೀವನದಲ್ಲಿ ಹಾಗೆಯೇ ಇದ್ದರು ಎಂದಿದ್ದರು. ನಂತರ ಅವರು ಕಂಠೀರವ ಸ್ಟೂಡಿಯೋದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಪ್ರತಿಮೆ ಹಾಗು ಸ್ಮಾರಕವನ್ನು ಲೋಕಾರ್ಪಣೆ ಮಾಡಿದ್ದರು.