ಬೆಂಗಳೂರು : ಇಂದಿನಿಂದ 6 ದಿನಗಳಕಾಲ ರಾಜ್ಯ ಪ್ರವಾಸದಲ್ಲಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ದು, ನಗರದ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (ಜೆಎನ್ಸಿಎಎಸ್ಆರ್) ಆವರಣದಲ್ಲಿ ಆವಿಷ್ಕಾರ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಹೊಸ ಆವಿಷ್ಕಾರಗಳ ಮೂಲಕ ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಈ ಸಂಸ್ಥೆಯು ಉತ್ತಮ ಸೇವೆ ಸಲ್ಲಿಸುತ್ತಿದೆ. ವಿಜ್ಞಾನಿಗಳು ಜನರಿಗೆ, ರೈತರಿಗೆ ವೈಜ್ಞಾನಿಕವಾಗಿ ತಮ್ಮ ಸಂಶೋಧನೆಗಳ ಮೂಲಕ ಸೇವೆ ಮಾಡಬೇಕಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದರು.
ಕನ್ನಡದಲ್ಲಿ ಭಾಷಣ ಆರಂಭಿಸಿದ ಉಪರಾಷ್ಟ್ರಪತಿ, ಈ ಕೇಂದ್ರದ ಭೂಮಿ ಪೂಜೆಗೆ ಬಂದಿದ್ದು ಸಂತಸ ತಂದಿದೆ. ಜೆಎನ್ಸಿಎಎಸ್ಆರ್ ಸಂಸ್ಥೆಯು ವಿಜ್ಞಾನ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆಗಳನ್ನು ಕೊಟ್ಟಿದೆ. ಈ ಸಂಸ್ಥೆ ಜಾಗತಿಕವಾಗಿ ತನ್ನ ಸಾಧನೆಗಳಿಂದ ಗಮನ ಸೆಳೆದಿದೆ. ವಿಭಿನ್ನ ವೈಜ್ಞಾನಿಕ ಸಂಶೋಧನೆಗಳ ಮೂಲಕ 300 ಪೇಟೆಂಟ್ಗಳನ್ನು ತನ್ನದಾಗಿಸಿಕೊಂಡಿರುವುದು ಸಂತಸದ ವಿಷಯ ಎಂದು ಹೇಳಿದರು.
ಓದಿ : ಒಲಿಂಪಿಕ್ಸ್ ಸಾಧಕರ ಜೊತೆ ಮೋದಿ ಬ್ರೇಕ್ಫಾಸ್ಟ್: ಐಸ್ಕ್ರೀಂ ಸವಿದು ಸಂಭ್ರಮಿಸಿದ ಪಿ.ವಿ ಸಿಂಧು
ಬೆಂಗಳೂರು ಕೆರೆಗಳ ಊರು, ಬೆಂಗಳೂರಿನಲ್ಲಿನ ಹಲವು ಕೆರೆಗಳು ಮರೆಯಾಗಿವೆ. ಉಳಿದ ಕೆರೆಗಳ ಪುನಶ್ಚೇತನ ಮಾಡುವ ಮೂಲಕ ಸಂರಕ್ಷಣೆ ಮಾಡಬೇಕಿದೆ. ಈ ಸಂಶೋಧನಾ ಸಂಸ್ಥೆಯ ಕ್ಯಾಂಪಸ್ ಸುತ್ತಮುತ್ತ ಹಲವು ಕೆರೆಗಳಿವೆ. ಅವುಗಳನ್ನು ಪುನಶ್ಚೇತನ ಮಾಡಬೇಕಿದೆ. ಜನರ ನಿರ್ಲಕ್ಷ್ಯ ದಿಂದ ಕೆರೆಗಳು ಮರೆಯಾಗಿವೆ.
ಇನ್ನೂ ಹಲವು ಒತ್ತುವರಿ ಆಗಿವೆ. ಹೊಸ ಸಿಎಂ ಡೈನಾಮಿಕ್ ಇದ್ದಾರೆ. ಕೆರೆಗಳ ಸಂರಕ್ಷಣೆಗೆ ಸಕಾಲದಲ್ಲಿ ನಿರ್ಧಾರ ಕೈಗೊಳ್ಳುವ ಭರವಸೆ ಇದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್.ಆರ್ ರಾವ್ ಭಾಗವಹಿಸಿದ್ದರು.