ಬೆಂಗಳೂರು: ಯುನೈಟೆಡ್ ಕಿಂಗ್ಡಮ್ನ (ಯುಕೆ) 22 ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸುವ ಉಪ ಕುಲಪತಿಗಳ ನಿಯೋಗವು ಎರಡು ದಿನಗಳ ಭೇಟಿಗಾಗಿ ನಗರಕ್ಕೆ ಗುರುವಾರ ಆಗಮಿಸಿದೆ. ಇದು ದೇಶಕ್ಕೆ ಇದುವರೆಗೆ ಭೇಟಿ ಕೊಟ್ಟಿರುವ ಯುಕೆ ಉಪ ಕುಲಪತಿಗಳ ಅತ್ಯಂತ ದೊಡ್ಡ ನಿಯೋಗ ಎನ್ನಲಾಗಿದೆ.
ರಾಜ್ಯದಲ್ಲಿ ಉನ್ನತ ಶಿಕ್ಷಣ ಕ್ರಮದಲ್ಲಿ ಅನುಷ್ಠಾನಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ- 2020)ಯು ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಒತ್ತು ನೀಡುವ ಆಶಯ ಹೊಂದಿದ್ದು, ಅದಕ್ಕನುಗುಣವಾಗಿ ಸಹಭಾಗಿತ್ವ ಪಾಲುದಾರಿಕೆ ಸಾಧ್ಯತೆಗಳನ್ನು ಗುರುತಿಸಲು ನಿಯೋಗ ಗಮನ ಕೇಂದ್ರೀಕರಿಸಲಿದೆ.
ರಾಜ್ಯದ ಉನ್ನತ ಶಿಕ್ಷಣ ಸಚಿವರ ನಿಯೋಗವು ಮೇ ತಿಂಗಳಲ್ಲಿ ಲಂಡನ್‌ಗೆ ಭೇಟಿ ಕೊಟ್ಟು ವಿಶ್ವ ಶಿಕ್ಷಣ ಸಮಾವೇಶ (ಇ.ಡಬ್ಲ್ಯು.ಎಫ್)ದಲ್ಲಿ ಪಾಲ್ಗೊಂಡಿತ್ತು. ಈ ಸಂದರ್ಭದಲ್ಲಿ ಸಚಿವರ ನಿಯೋಗವು ಯುಕೆಯ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿತ್ತು. ಜೊತೆಗೆ, ಕೆಲವು ವಿಶ್ವವಿದ್ಯಾಲಯಗಳಿಗೆ ಭೇಟಿ ಕೊಟ್ಟಿತ್ತು. ಅದರ ಬೆನ್ನಲ್ಲೇ ಯುಕೆ ಉಪ-ಕುಲಪತಿಗಳ ನಿಯೋಗವು ರಾಜ್ಯಕ್ಕೆ ಬಂದಿದೆ.
ಬೋಧಕರ ವಿನಿಮಯಕ್ಕೆ ಅವಕಾಶ: ಎರಡೂ ರಾಷ್ಟ್ರಗಳ ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ವಿದ್ಯಾರ್ಥಿಗಳ ಹಾಗೂ ಬೋಧಕರ ವಿನಿಮಯಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಲು ಹಾಗೂ ಸಂಶೋಧನಾ ಉತ್ಕೃಷ್ಟತೆ ಸಾಧಿಸಲು ಪೂರಕವಾಗುವಂತೆ ಸಹಭಾಗಿತ್ವದ ಸಾಧ್ಯತೆಗಳನ್ನು ಗುರುತಿಸಲು ಯು.ಕೆ. ಉಪ-ಕುಲಪತಿಗಳ ತಂಡವು ಉತ್ಸಾಹದಿಂದಿದೆ. ಇದೇ ಸಂದರ್ಭದಲ್ಲಿ ನಗರದಲ್ಲಿ ಎರಡು ದಿನಗಳ ದುಂಡುಮೇಜಿನ ಶೈಕ್ಷಣಿಕ ಸಮಾಲೋಚನಾ ಸಭೆಯನ್ನು ಏರ್ಪಡಿಸಲಾಗಿದೆ.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ನಾರಾಯಣ ಮಾತನಾಡಿ, ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗಳು ಭಾರತ- ಯುನೈಟೆಡ್ ಕಿಂಗ್ಡಮ್ ನಡುವಿನ ಸಂಬಂಧದ ಆಧಾರಸ್ತಂಭಗಳಾಗಿವೆ. ಎನ್ಇಪಿಗೆ ತಕ್ಕಂತೆ ಎರಡೂ ಕಡೆಯ ವಿವಿಗಳ ನಡುವೆ ಸಹಕಾರ ಬಲವರ್ಧನೆಯ ಉದ್ದೇಶದೊಂದಿಗೆ ಹೋದ ವರ್ಷವೇ ಭಾರತ-ಯುಕೆ ನೀಲನಕ್ಷೆ 2030 ಕಾರ್ಯಕ್ರಮವನ್ನು ಘೋಷಿಸಲಾಗಿದೆ. ಸಹಭಾಗಿತ್ವದಿಂದಾಗಿ ವಿದ್ಯಾರ್ಥಿಗಳು, ಬೋಧಕರು ಮತ್ತು ಸಂಶೋಧಕರ ದ್ವಿಮುಖ ವಿನಿಮಯ ಸುಗಮವಾಗಿ ನಡೆಯಲಿದೆ ಎಂದು ವಿವರಿಸಿದರು.
ಆತ್ಮನಿರ್ಭರ ಭಾರತ ನಿರ್ಮಾಣ ಸಾಕಾರ: ಇದಕ್ಕೆ ಪೂರಕವಾಗಿ ವಿಶ್ವದ ಪ್ರತಿಷ್ಠಿತ ವಿವಿಗಳು ಕರ್ನಾಟಕದಲ್ಲಿ ತಮ್ಮ ಕ್ಯಾಂಪಸ್ಗಳನ್ನು ತೆರೆಯಲು ಉತ್ಸುಕವಾಗಿವೆ. ಎನ್ಇಪಿ ಜಾರಿಯಲ್ಲಿ ರಾಜ್ಯವು ಮುಂಚೂಣಿಯಲ್ಲಿರುವುದು ವರದಾನವಾಗಿದ್ದು, ಇದರಿಂದ ಆತ್ಮನಿರ್ಭರ ಭಾರತ ನಿರ್ಮಾಣ ಕೂಡ ಸಾಕಾರಗೊಳ್ಳಲಿದೆ.
ದೇಶದ ಮುಂಚೂಣಿ ಸಂಸ್ಥೆಗಳು, ಅಗ್ರಪಂಕ್ತಿಯ ವಿವಿಗಳು ಮತ್ತು ಸಂಶೋಧನಾ ಕೇಂದ್ರಗಳು ರಾಜ್ಯದಲ್ಲಿ ನೆಲೆಯೂರಿವೆ. ಇದರಿಂದಾಗಿ ರಾಜ್ಯವು ನಾವೀನ್ಯತೆ, ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಆಗರವಾಗಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕ ಮತ್ತು ಬ್ರಿಟನ್ ನಡುವಿನ ಶೈಕ್ಷಣಿಕ ಸಹಭಾಗಿತ್ವ ಮತ್ತಷ್ಟು ವಿಸ್ತೃತಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.
ಎನ್ಇಪಿ 21ನೇ ಶತಮಾನದ ಅಗತ್ಯತೆ ಪೂರೈಸಲಿದೆ: ಎನ್ಇಪಿ ಸಂಚಾಲನಾ ಸಮಿತಿ ಮುಖ್ಯಸ್ಥ ಡಾ.ಕೆ. ಕಸ್ತೂರಿರಂಗನ್ ಮಾತನಾಡಿ, ಎನ್ಇಪಿ ನೀತಿಯು 21ನೇ ಶತಮಾನದ ಅಗತ್ಯಗಳನ್ನು ಪೂರೈಸಲಿದೆ. ಭಾರತೀಯ ಮೌಲ್ಯ ವ್ಯವಸ್ಥೆಯನ್ನು ಆಧರಿಸಿರುವ ಈ ನೀತಿಯು ಬಹುಶಿಸ್ತಿಯ ಕಲಿಕೆಯನ್ನು ಪರಿಚಯಿಸುತ್ತಿದೆ.
ಇದಲ್ಲದೆ, ಉನ್ನತ ಶಿಕ್ಷಣ ವಲಯದಲ್ಲಿ ಸಂಶೋಧನೆ ಮತ್ತು ಬೋಧನೆಗೆ ಸರಿಸಮನಾದ ಪ್ರಾಶಸ್ತ್ಯ ಕೊಡಲಾಗಿದೆ. ಇದಕ್ಕೆಂದೇ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಹುಟ್ಟು ಹಾಕಲಾಗಿದೆ. ಎನ್ಇಪಿ ಅನುಷ್ಠಾನಗೊಳಿಸಲು ಹಾಗೂ ಶೈಕ್ಷಣಿಕ ಉಪಕ್ರಮಗಳನ್ನು ಕೈಗೊಳ್ಳಲು ಸಚಿವ ಅಶ್ವತ್ಥ್ ನಾರಾಯಣ ಮಾಡುತ್ತಿರುವ ಕೆಲಸಗಳ ಬಗ್ಗೆ ಅವರ ಮೆಚ್ಚುಗೆ ವ್ಯಕ್ತಪಡಿಸಿದರು.
ಯೂನಿವರ್ಸಿಟೀಸ್ ಯುಕೆ ಇಂಟರ್ನ್ಯಾಷನಲ್ ನಿರ್ದೇಶಕ ವಿವಿಯನ್ ಸ್ಟೆರ್ನ್ ಮಾತನಾಡಿ, ಕರ್ನಾಟಕ ಪುರೋಗಾಮಿ ರಾಜ್ಯವಾಗಿದೆ. ಇದರೊಂದಿಗೆ ಅತ್ಯಾಧುನಿಕ ಜ್ಞಾನಶಾಖೆಗಳಲ್ಲಿ ಸಹಭಾಗಿತ್ವ ಸ್ಥಾಪನೆಯು ಚಾರಿತ್ರಿಕ ಸಾಧನೆ ಎಂದರು. ಬ್ರಿಟಿಷ್ ಕೌನ್ಸಿಲ್ನ ರಾಷ್ಟ್ರೀಯ ನಿರ್ದೇಶಕಿ ಬಾರ್ಬರಾ ವಿಕ್ ಹ್ಯಾಮ್ ಮತ್ತು ದಕ್ಷಿಣ ಭಾರತ ನಿರ್ದೇಶಕರಾದ ಜನಕ ಪುಷ್ಪನಾಥನ್ ಕೂಡ ಮಾತನಾಡಿದರು.
ಸಹಭಾಗಿತ್ವ ಒಪ್ಪಂದಕ್ಕೆ ಅಂಕಿತ: ಈ ವೇಳೆ ರಾಜ್ಯದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಮತ್ತು ಯುನೈಟೆಡ್ ಕಿಂಗ್ಡಮ್ನ ನಾಟಿಂಗ್ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯಗಳು ಅಶ್ವತ್ಥ್ನಾರಾಯಣ ಅವರ ಸಮ್ಮುಖದಲ್ಲಿ ಸಹಭಾಗಿತ್ವ ಒಪ್ಪಂದಕ್ಕೆ ಅಂಕಿತ ಹಾಕಿದವು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್, ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಅನ್ನಾ ಶಾಟ್ಬೋಲ್ಟ್ ಉಪಸ್ಥಿತರಿದ್ದರು. ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಗೋಪಾಲಕೃಷ್ಣ ಜೋಶಿ ವಂದಿಸಿದರು.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆಗೆ ವಿಧಾನಸೌಧದ ಮತಕೇಂದ್ರದಲ್ಲಿ ಸಕಲ ಸಿದ್ಧತೆ