ಬೆಂಗಳೂರು: ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕು. ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಮನೆಯಲ್ಲಿಯೇ ಆರೈಕೆ ಪಡೆಯಲು ಮುಂದಾಗುತ್ತಿದ್ದು, ಆರೋಗ್ಯದ ಕಾಳಜಿಯ ದೃಷ್ಟಿಯಿಂದ ಅವರಿಗೆಲ್ಲ ಮೆಡಿಕಲ್ ಕಿಟ್‌ಗಳನ್ನ ವಿತರಿಸುವ ಕೆಲಸವಾಗಬೇಕು ಎಂದು ಸಚಿವ ಆರ್.ಅಶೋಕ್ ತಾಕೀತು ಮಾಡಿದರು.
ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸಚಿವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿಗಳು, ಸಿಇಒ ಸೇರಿದಂತೆ ಇತರ ಹಿರಿಯ ಅಧಿಕಾರಿಗಳ ಜೊತೆಗೆ ವರ್ಚುವಲ್ ಸಭೆ ನಡೆಸಿದರು. ಈ ವೇಳೆ ಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಚರ್ಚೆ ನಡೆಸಲಾಯಿತು. ಆಶಾ ಕಾರ್ಯಕರ್ತೆಯರ ಮೂಲಕ ಹೋಂ ಐಸೋಲೇಷನ್ನಲ್ಲಿರುವ ಸೋಂಕಿತರಿಗೆ ಮೆಡಿಕಲ್ ಕಿಟ್ ತಲುಪಿಸಬೇಕು. ಸೋಂಕಿತರು ಮೊದಲು ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಬೇಕು. ಅಲ್ಲಿನ ವೈದ್ಯರು ಸೋಂಕಿತರ ಆರೋಗ್ಯ ಪರೀಕ್ಷಿಸಿ ಅವರಿಗೆ ಯಾವ ರೀತಿಯ ಚಿಕಿತ್ಸೆ ಅಗತ್ಯವಿದೆ ಎಂಬುದನ್ನ ನಿರ್ಧರಿಸುತ್ತಾರೆ ಎಂದು ತಿಳಿಸಿದರು.
ಈಗಾಗಲೇ ಹೊಸಕೋಟೆಯ ಎಂವಿಜೆ ವೈದ್ಯಕೀಯ ಹಾಗೂ ಸಂಶೋಧನಾ ಆಸ್ಪತ್ರೆಯು 10 ಹಾಸಿಗೆಗಳ ವೆಂಟಿಲೇಷನ್ ಸೌಕರ್ಯ ಹೊಂದಿದೆ. ಇಲ್ಲಿ ಇನ್ನೂ ಎರಡು ವೆಂಟಿಲೇಟರ್ ಹಾಸಿಗೆಗಳ ವ್ಯವಸ್ಥೆ ಮಾಡಬೇಕು. ಅದರಂತೆ ನೆಲಮಂಗಲದ ಆಸ್ಪತ್ರೆಯಲ್ಲಿನ ವೈದ್ಯಕೀಯ ಸೌಕರ್ಯಗಳನ್ನು ಕೂಡಲೇ ಮತ್ತಷ್ಟು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು. ದೊಡ್ಡಬಳ್ಳಾಪುರದಲ್ಲಿ 100 ಹಾಸಿಗೆಗಳ ಮೇಕ್ ಶಿಫ್ಟ್ ಆಸ್ಪತ್ರೆಗೆ ವ್ಯವಸ್ಥೆ ಮಾಡಬೇಕು. ಕೋವಿಡ್ ನಿಯಂತ್ರಣಕ್ಕೆ ಹಾಗೂ ಅಗತ್ಯ ಆರೋಗ್ಯ ಸೇವೆಗಳನ್ನ ರೂಪಿಸುವುದಕ್ಕೆಂದೆ ವಿಪತ್ತು ನಿರ್ವಹಣಾ ನಿಧಿಯಿಂದ 14 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ತಾತ್ಕಾಲಿಕ ಚಿತಾಗಾರಗಳನ್ನು ನಿರ್ಮಿಸಲು ಕೂಡಲೇ ಸರ್ಕಾರಿ ಜಾಗ ಗುರುತಿಸಬೇಕು. ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಿಗೆ ಸುರಕ್ಷತೆಯ ದೃಷ್ಟಿಯಿಂದ ಪೊಲೀಸರನ್ನು ನಿಯೋಜಿಸಬೇಕು ಎಂದು ಹೇಳಿದರು.