ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆ ಕಲಾಸಿಪಾಳ್ಯ ಮಾರುಕಟ್ಟೆಯನ್ನು ಬಿಬಿಎಂಪಿ ಅಧಿಕಾರಿಗಳು ಸೀಲ್ಡೌನ್ ಮಾಡಿದ್ದಾರೆ. ಆದರೂ ಇಂದು ಮಾರುಕಟ್ಟೆಯಲ್ಲಿ ಸೊಪ್ಪು, ತರಕಾರಿ, ಹೂವಿನ ಮಾರಾಟ ನಡೆಸುತ್ತಿದ್ದ ದೃಶ್ಯಗಳು ಕಂಡುಬಂದವು.
ಕಲಾಸಿಪಾಳ್ಯ ಮುಖ್ಯರಸ್ತೆಯಲ್ಲೂ ಸಹ ಜನರು ಎಂದಿನಂತೆ ಓಡಾಟ ನಡೆಸುತ್ತಿದ್ದಾರೆ. ಎಸ್ಪಿ ರಸ್ತೆ ಕೂಡ ಸೀಲ್ಡೌನ್ ಆಗಿದ್ದರೂ, ಕೆಲ ವ್ಯಾಪಾರಿಗಳು ಕದ್ದು ಮುಚ್ಚಿ ವ್ಯಾಪಾರ ನಡೆಸುತ್ತಿದ್ದಾರೆ.
ಇನ್ನೊಂದೆಡೆ, ಕೆ.ಆರ್ ಮಾರುಕಟ್ಟೆ ಬಂದ್ ಮಾಡಿರುವುದರಿಂದ ಸೊಪ್ಪು, ಹೂವು, ತರಕಾರಿ ಬೆಳೆದ ರೈತರು ನಷ್ಟ ಅನುಭವಿಸುವಂತಾಗಿದೆ. ಜೊತೆಗೆ ಜಾನಪದ ಅಕಾಡೆಮಿಯ ವ್ಯಕ್ತಿಯೊಬ್ಬರಿಗೆ ಕೊರೊನಾ ಬಂದ ಹಿನ್ನೆಲೆ ಕನ್ನಡ ಭವನ ಹಾಗೂ ರವೀಂದ್ರ ಕಲಾಕ್ಷೇತ್ರವನ್ನು ಕೂಡ ಬಂದ್ ಮಾಡಲಾಗಿದೆ.