ಬೆಂಗಳೂರು: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧ ಹುಳಿಯಾರು ಸೇರಿದಂತೆ ಬೇರೆ ಕಡೆಗಳಲ್ಲಿ ಕುರುಬ ಸಮುದಾಯದ ಬಾಂಧವರು ಪ್ರತಿಭಟನೆ ಮಾಡುವುದನ್ನು ಕೈಬಿಡುವಂತೆ ಕುರುಬ ಸಮುದಾಯದ ಮಠಾಧೀಶರು ಸೂಚಿಸಬೇಕೆಂದು ಅಖಿಲ ಭಾರತ ವೀರಶೈವ ಮಾಹಾಸಭೆಯ ಯುವ ಘಟಕದ ಮಾಜಿ ರಾಜ್ಯಾಧ್ಯಕ್ಷ ಉಮೇಶ್ ಪಾಟೀಲ್ ಒತ್ತಾಯಿಸಿದ್ದಾರೆ.
ಈ ಗೊಂದಲಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕ್ಷಮೆ ಕೋರಿದ್ದಾರೆ, ಅಲ್ಲದೆ ಅದೇ ವೃತ್ತಕ್ಕೆ ಕನಕದಾಸರ ಹೆಸರಿಡುವುದಾಗಿಯೂ ಘೋಷಿಸಿದ್ದಾರೆ. ಇಷ್ಟಾದರೂ ಸಚಿವರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿರುವ ಅನುಮಾನ ಮೂಡುತ್ತಿದೆ.
![Press release](https://etvbharatimages.akamaized.net/etvbharat/prod-images/kn-bng-04-veerashaiva-mahasabha-letter-script-9021933_21112019132710_2111f_1574323030_691.jpg)
ವೀರಶೈವ ಲಿಂಗಾಯತ ಸಮುದಾಯ ಹಾಗೂ ಕುರುಬ ಸಮಾಜಗಳ ನಡುವೆ ಗೊಂದಲ ಸೃಷ್ಟಿಸಿ ರಾಜಕೀಯ ಲಾಭ ಪಡೆದುಕೊಳ್ಳುವ ಹುನ್ನಾರ ನಡೆಸಿದಂತಿದೆ. ಹೀಗಾಗಿ ಕುರುಬ ಸಮಾಜದ ಗುರುಗಳು ಎರಡೂ ಸಮಾಜಗಳ ನಡುವೆ ಅನಗತ್ಯ ಕಂದಕ ಸೃಷ್ಟಿಯಾಗುವುದನ್ನು ತಪ್ಪಿಸಲು ಪ್ರತಿಭಟನೆ ನಡೆಸುವುದನ್ನು ಕೈಬಿಡುವಂತೆ ಸೂಚನೆ ನೀಡಬೇಕೆಂದು ಪತ್ರಿಕಾ ಹೇಳಿಕೆ ಮೂಲಕ ವಿನಂತಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು ಹಾಗೂ ಕುರುಬ ಸಮಾಜದ ಹಿರಿಯ ನಾಯಕರೂ ಆಗಿರುವ ಕೆ.ಎಸ್. ಈಶ್ವರಪ್ಪ ಅವರು ಕುರುಬ ಸಮುದಾಯದ ಮುಖಂಡರಿಗೆ ತಿಳಿ ಹೇಳಿ ಎರಡು ಸಮಾಜದ ನಡುವೆ ಗೊಂದಲ ಉಂಟಾಗಂತೆ ನೋಡಿಕೊಳ್ಳಬೇಕೆಂದು ಉಮೇಶ್ ಪಾಟೀಲ್ ಮನವಿ ಮಾಡಿದ್ದಾರೆ.