ಬೆಂಗಳೂರು: ಮೂರು ರಾಜ್ಯಗಳಿಗೆ ಉಪಟಳ ನೀಡಿದ್ದ ಕಾಡುಗಳ್ಳ ವೀರಪ್ಪನ್ನ ಮತ್ತೊಬ್ಬ ಸಹಚರ ಸಾವನ್ನಪ್ಪಿದ್ದಾನೆ. ನರಹಂತಕ ಅಳಿದು ದಶಕಗಳೇ ಕಳೆದರೂ ಅವನ ಸಹಚರರು ಇನ್ನೂ ಜೈಲಿನಲ್ಲಿ ಜೀವನ ಕಳೆಯುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಾಂಬ್ ಸ್ಫೋಟ ಪ್ರಕರಣದಡಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿ ಮೀಸೇಕಾರ್ ಮಾದಯ್ಯ ಉಸಿರಾಟದ ತೊಂದರೆಯಿಂದಾಗಿ ಸಾವನ್ನಪ್ಪಿದ್ದಾನೆ. ಸತತ 34 ವರ್ಷಗಳಿಂದ ಜೈಲಿನಲ್ಲೇ ಇರುವ ಮೀಸೇಕಾರ್ ಮಾದಯ್ಯನನ್ನು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು.
1993ರಲ್ಲಿ ಪಾಲಾರ್ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಎಸ್ಟಿಎಫ್ ಅಧಿಕಾರಿ ಸ್ಪೆಷಲ್ ಟಾಸ್ಕ್ ಫೋರ್ಸ್ ಚೀಫ್ ಆಗಿದ್ದ ಗೋಪಾಲಕೃಷ್ಣನ್ ಸೇರಿದಂತೆ 22 ಜನರು ಸಾವನ್ನಪ್ಪಿದ್ದರು. ಎಂ.ಎಂ.ಹಿಲ್ಸ್ನಲ್ಲಿ ನಡೆದಿದ್ದ ಈ ಸ್ಪೋಟದಲ್ಲಿ ವೀರಪ್ಪನ್, ಬಿಲವೇಂದ್ರನ್ , ಸೈಮನ್ ಜೊತೆಗೆ ಈಗ ಸಾವನ್ನಪ್ಪಿರುವ ಮೀಸೇಕಾರ್ ಮಾದಯ್ಯ ಕೂಡ ಪ್ರಮುಖ ಆರೋಪಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಬಂಧಿತನಾಗಿದ್ದ ಮೀಸೇಕಾರ ಮಾದಯ್ಯನ ಮೇಲೆ ಟೆರರಿಸ್ಟ್ ಆ್ಯಂಡ್ ಡಿಸ್ಕ್ರಿಪ್ಟಿವ್ ಆಕ್ಟಿವಿಟೀಸ್ ಪ್ರಿವೆನ್ಷನ್ ಕಾಯ್ದೆಯಾಡಿ ಈತನನ್ನು ಬಂಧಿಸಲಾಗಿತ್ತು.
ಕೃತ್ಯದ ಗಂಭೀರತೆಯನ್ನರಿತ ಟಾಡಾ ನ್ಯಾಯಾಲಯ ಬಿಲವೇಂದ್ರನ್, ಸೈಮನ್, ಮೀಸೇಕಾರ್ ಮಾದಯ್ಯನಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ನಂತರದ ದಿನಗಳಲ್ಲಿ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಗಿತ್ತು. ಇದೇ ವೇಳೇ ಟಾಡಾ ಸೆಕ್ಷನ್ ಅನ್ನು ರದ್ದುಪಡಿಸಿ ಪ್ರಿವೆನ್ಷನ್ ಆಫ್ ಟೆರರಿಸ್ಟ್ ಆಕ್ಟಿವಿಟೀಸ್ ಎಂಬ ಹೊಸ ಸೆಕ್ಷನ್ ಅಳವಡಿಸಲಾಗಿತ್ತು. ಟಾಡಾ ರದ್ದುಗೊಂಡಿದ್ದರೂ ಅದರಲ್ಲಿ ಶಿಕ್ಷಿತರಾಗಿದ್ದ ವ್ಯಕ್ತಿಗಳಿಗೆ ಯಾವುದೇ ಬದಲಾವಣೆ ಮಾಡಿರಲಿಲ್ಲ. ಹೀಗಾಗಿ ಸುಮಾರು 34 ವರ್ಷಗಳಿಂದಲೂ ಕೂಡ ಮೀಸೇಕಾರ ಮಾದಯ್ಯ ಜೈಲಿನಲ್ಲಿಯೇ ಕಾಲ ಕಳೆಯುತ್ತಿದ್ದ. ಇನ್ನು ಮಿಸೆ ಮಾದಯ್ಯನ ಕುಟುಂಬ ಕೂಡ ಈಗ ಬೀದಿಗೆ ಬಿದ್ದಿದ್ದು ಕೂಲಿ ಮಾಡಿಕೊಂಡು ಜೀವನ ಮಾಡುತ್ತಿರುವ ಕುಟುಂಬಕ್ಕೆ ಶವವನ್ನೂ ಕೊಂಡೊಯ್ಯಲು ಹಣವಿಲ್ಲದಂತಾಗಿದೆ. ಹೀಗಾಗಿ ಸ್ನೇಹಿತರ ಸಹಾಯದಿಂದ ಶವವನ್ನು ಈರೋಡ್ಗೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಲಿದ್ದಾರೆ.
ಇದನ್ನೂ ಓದಿ: ಆರ್‌ಎಸ್‌ಎಸ್ ರ‍್ಯಾಲಿಯಲ್ಲಿ ಹಿಂದೂ ಮುನ್ನಾನಿ ಜಿಲ್ಲಾಧ್ಯಕ್ಷ ಸಾವು