ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಸಾಮಾನ್ಯ ದಿನಗಳಲ್ಲಿ 50-50 ರೂಲ್ಸ್ ಜಾರಿಯಾದರೆ ವಾರಾಂತ್ಯದಲ್ಲಿ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಶುಕ್ರವಾರ ರಾತ್ರಿ 8 ಗಂಟೆಯಿಂದಲೇ ಆರಂಭವಾಗುವ ವಾರಾಂತ್ಯದ ನಿಷೇಧಾಜ್ಞೆಯು ಸೋಮವಾರ ಬೆಳಗ್ಗೆ 5 ಗಂಟೆಗೆ ಮುಕ್ತವಾಗಲಿದೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋ, ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳು ತುರ್ತು ಅಗತ್ಯ ಸೇವೆಗೆ ಒಳಪಡಲಿವೆ. ಬಿಎಂಟಿಸಿ ಬಸ್ ಸಂಚಾರ ಬಂದ್ ಆಗಲಿದ್ದು, ಮೆಟ್ರೋ ಓಡಾಟ ಎಂದಿನಂತೆ ಇರಲಿದೆ.
ಆದರೆ ವಿಮಾನ ನಿಲ್ದಾಣಕ್ಕೆ ತೆರಳಲು ಯಾವುದೇ ಅಡ್ಡಿಯಿಲ್ಲ ಎಂದು ಬಿಎಂಟಿಸಿ ತಿಳಿಸಿದ್ದು, ವಾಯುವಜ್ರ ಬಸ್ ಸಂಚರಿಸುತ್ತವೆ. ಪ್ರಯಾಣಿಕರು ಕಡ್ಡಾಯವಾಗಿ ವಿಮಾನದ ಟಿಕೆಟ್ ಹೊಂದಿರಲೇಬೇಕು. ಅಗತ್ಯ ಸೇವೆಯಡಿ ಮಾತ್ರ ಬಿಎಂಟಿಸಿ ಬಸ್ ಓಡಾಟ ಇರಲಿದ್ದು, ಸಾರ್ವಜನಿಕ ಸಂಚಾರ ಸೇವೆ ಇಲ್ಲ. ಕೊರೊನಾ ವಾರಿಯರ್ಸ್ಗೆ ಸಂಚಾರಕ್ಕೆ ಅವಕಾಶವಿದ್ದು, ಐಡಿ ಕಾರ್ಡ್ ಕಡ್ಡಾಯವಾಗಿದೆ.
ಮೆಟ್ರೋ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲ:
ಶನಿವಾರ - ಭಾನುವಾರ ಎಂದಿನಂತೆ ಹಸಿರು ಮತ್ತು ನೇರಳೆ ಎರಡು ಮಾರ್ಗದಲ್ಲೂ ಮೆಟ್ರೋ ಕಾರ್ಯಾಚರಣೆ ಇರಲಿದ್ದು, ಶೇಕಡಾ 50ರಷ್ಟು ಪ್ರಯಾಣಿಕರಿಗೆ ಮಾತ್ರ ಮೆಟ್ರೋದಲ್ಲಿ ಅವಕಾಶ ನೀಡಲಾಗುತ್ತಿದೆ. ಸದ್ಯ ಮೆಟ್ರೋದಲ್ಲಿ ನಿತ್ಯ 1,800ರಿಂದ 1,900 ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಕೋವಿಡ್ ಹೆಚ್ಚಳವಾದ ಕಾರಣ 800ರಿಂದ 900 ಪ್ರಯಾಣಿಕರ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಕೋವಿಡ್ ನಿಯಮದನ್ವಯ ಮೆಟ್ರೋ ಓಡಿಸಲು ನಿರ್ಧಾರ ಮಾಡಲಾಗಿದ್ದು, ಸಂಚಾರದ ಅವಧಿ ಕಡಿತಗೊಳಿಸಲಾಗಿದೆ. ಸದ್ಯ 10ರಿಂದ 15 ನಿಮಿಷಕ್ಕೊಂದು ಮೆಟ್ರೋ ರೈಲು ಕಾರ್ಯಾಚರಣೆಯಾಗುತ್ತಿದೆ. ನಿಷೇಧಾಜ್ಞೆ ವೇಳೆ ಅರ್ಧ ಗಂಟೆಗೊಂದು ಮೆಟ್ರೋ ರೈಲು ಓಡಾಡಲಿದೆ.
ಗೋವಾ, ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ:
ಈ ವಾರಾಂತ್ಯದ ನಿಷೇಧಾಜ್ಞೆ ಸಮಯದಲ್ಲಿ ರಾಜ್ಯಾದ್ಯಂತ ಕೆಎಸ್ಆರ್ಟಿಸಿ ಸೇವೆ ಎಂದಿನಂತೆ ಇರಲಿದ್ದು, ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡಲಾಗುತ್ತಿದೆ. ಅಗತ್ಯಕ್ಕೆ ತಕ್ಕಂತೆ ರಾಜ್ಯಾದ್ಯಂತ ಕೆಎಸ್ಆರ್ಟಿಸಿ ಬಸ್ ಸಂಚರಿಸುತ್ತವೆ. ಅಂತಾರಾಜ್ಯ ಬಸ್ ಸಂಚಾರವೂ ಇದ್ದು, ಪ್ರಮುಖವಾಗಿ ಗೋವಾ, ಕೇರಳ ಹಾಗೂ ಮಹಾರಾಷ್ಟ್ರ ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ: ದೇಶದಲ್ಲಿ ನಿನ್ನೆಗಿಂತ ದುಪ್ಪಟ್ಟಾದ ಕೊರೊನಾ ಪಾಸಿಟಿವ್ ಸಂಖ್ಯೆ: ಒಂದೇ ದಿನ 325 ಮಂದಿ ಬಲಿ