ಬೆಂಗಳೂರು: ಲಾಕ್ಡೌನ್ನಿಂದ ಎಲ್ಲವೂ ಸರಿ ಹೋಗುತ್ತದೆ ಅಂದುಕೊಂಡಿದ್ದಾರೆ. ಆಡಳಿತ ಪಕ್ಷಕ್ಕೆ ಕೊರೊನಾ ಬಂದ ಹಾಗೆ ಆಗಿದೆ. ವಿಧಾನಸೌಧದಲ್ಲಿ ಕೊರೊನಾ ಬಂದರೆ ಸರ್ಕಾರಕ್ಕೆ ಕೊರೊನಾ ಬಂದ ಹಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಲಾಕ್‌ಡೌನ್ ಬದಲು ವೈದ್ಯಕೀಯ ವ್ಯವಸ್ಥೆ, ಆಸ್ಪತ್ರೆ ಸೌಲಭ್ಯವನ್ನು ಹೆಚ್ಚಿಸಬೇಕು. ಸರ್ಕಾರ ಗಡಿ ನಾಡನ್ನು ಬಂದ್ ಮಾಡಬೇಕು. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಹೆಚ್ಚು ಸೋಂಕು ತಗುಲಿದೆ. ಅಲ್ಲಿಂದ ಬಂದವರಿಂದ ಹೆಚ್ಚಿಗೆ ಕೊರೊನಾ ಪ್ರಕರಣ ಕಾಣಿಸಿಕೊಂಡಿದೆ ಎಂದರು.
ಲಕ್ಷಾಂತರ ಕಾರ್ಮಿಕರು ಬೆಂಗಳೂರು ಬಿಟ್ಟು ಹೋಗಿದ್ದಾರೆ. ಅವರು ಬೆಂಗಳೂರಿನಲ್ಲಿ ತಮ್ಮ ಜೀವನ ನಡೆಸುತ್ತಿದ್ದರು. ಅವರನ್ನು ತಡೆಯಲು ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.
ಲಾಕ್ಡೌನ್ನಿಂದ ಯಾವುದೇ ಪ್ರಯೋಜನವಿಲ್ಲ. ಸರ್ಕಾರಕ್ಕೆ ಬೆಳಗ್ಗೆಯೊಂದು ಸಲಹೆ ಕೊಡ್ತಾರೆ, ಸಂಜೆಯೊಂದು ಸಲಹೆ ಕೊಡ್ತಾರೆ. ಪ್ರತಿಪಕ್ಷಗಳಿಗೆ ಬುದ್ಧಿ ಹೋಗಿದೆ ಎಂದು ಕಿಡಿಕಾರಿದರು.
ಲಾಕ್‌ಡೌನ್ ಮಾಡಿದ ತಕ್ಷಣ ಎಲ್ಲವೂ ಬದಲಾವಣೆ ಆಗುತ್ತೆ ಎಂದಲ್ಲ. ಆದರೆ ಈಗ ಸರ್ಕಾರ ಲಾಕ್‌ಡೌನ್ ಮಾಡಲು ಹೊರಟಿದೆ. ಬೇಕಾದಾಗ ಲಾಕ್‌ಡೌನ್ ಮಾಡೋದು, ಬೇಡವಾದಾಗ ಬೇಡ ಅನ್ನೋದು. ಇದಕ್ಕೆ ನೀತಿ ನಿಯಮ ಏನೂ ಇಲ್ಲ ಎಂದು ಕಿಡಿಕಾರಿದರು.