ಬೆಂಗಳೂರು: ಪರಿಸರಸ್ನೇಹಿ ಹಾಗೂ ಉತ್ಕೃಷ್ಟ ಗುಣಮಟ್ಟ ಕಾಯ್ದುಕೊಳ್ಳಲು ಬಾಳೆ ನಾರಿನಿಂದ ತಯಾರಿಸಿರುವ ಕೈಚೀಲಗಳು ಸೇರಿದಂತೆ ಇತರೆ ಉತ್ಪನ್ನಗಳು, ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸಿರಿಧಾನ್ಯ ಹಾಗೂ ಸಾವಯವ ವಸ್ತುಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ನೋಡುಗರ ಗಮನ ಸೆಳೆದವು.
ಮೇಳದಲ್ಲಿ ಬಾಳೆ ನಾರಿನಿಂದ ತಯಾರಿಸುವ ಬ್ಯಾಗ್ಗಳು, ವ್ಯಾನಿಟಿ ಬ್ಯಾಗ್, ಕಡತಗಳು, ಕಚೇರಿಗೆ ಸಂಬಂಧಿಸಿದ ವಸ್ತುಗಳನ್ನ ಗ್ರಾಹಕರು ಮುಗಿಬಿದ್ದು ಖರೀದಿಸಿದರು. ಗ್ರಾಮ್ಯ ಟರ್ನ್ ಕೀ ಲಿಮಿಟೆಡ್ ಕಂಪನಿಯ ಅಧ್ಯಕ್ಷರಾಗಿರುವ ಶ್ರೀಕಾಂತ್ ಎಂ ಹೆಬ್ಬಾರ್ ಮೂಲತಃ ಬ್ಯಾಂಕ್ ಉದ್ಯೋಗಿಯಾಗಿದ್ದು, ನಿವೃತ್ತಿ ಪಡೆದು ಸಹದೋಗ್ಯಿಗಳ ನೆರವಿನಿಂದ ತಾಲೂಕಿಗೆ ಮಾತ್ರ ಸೀಮಿತವಾಗಿದ್ದ ನಾರಿನಿಂದ ಬ್ಯಾಗ್ ತಯಾರಿಸುವ ಕಲ್ಪನೆ ಇಂದು ದೊಡ್ಡದಾಗಿ ಬೆಳೆದು ಹೆಮ್ಮರವಾಗಿ ಬೆಳೆದು ನಿಂತಿದೆ.
1996ರಲ್ಲಿ ಸ್ವಶಕ್ತಿ ಕಾರ್ಯಕ್ರಮದಡಿ ಚಿತ್ರದುರ್ಗದ ಹಿರಿಯೂರು ತಾಲೂಕಿನ ಲಕ್ವನಹಳ್ಳಿಯ ಬಡ ಮಹಿಳೆಯರನ್ನು ಆರ್ಥಿಕ ಹಾಗೂ ಸಾಮಾಜಿಕವಾಗಿ ಸುಸ್ಥಿರಗೊಳಿಸಲು ಗುಡಿ ಕೈಗಾರಿಕೆ ಪರಿಕಲ್ಪನೆಯಡಿ ನಾರಿನಿಂದ ಬ್ಯಾಗ್ಗಳಾಗಿ ಕುಸುರಿ ಮಾಡುವುದನ್ನ ಆರಂಭಿಸಿದ್ದರು. ಗ್ರಾಮೀಣ ಭಾಗದ ಮಾರಾಟಕ್ಕೆ ಸೀಮಿತವಾಗಿದ್ದ ವಹಿವಾಟು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ. ಹೆಸರಾಂತ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ದೂರದ ಅಮೆರಿಕ ಸೇರಿ ವಿವಿಧ ದೇಶಗಳಿಗೆ ರಫ್ತು ಮಾಡಿ ಬೇಡಿಕೆಯನ್ನ ಹೆಚ್ಚಿಸಿಕೊಂಡಿದ್ದಾರೆ.
ನಾರಿನಿಂದ ತಯಾರಾದ ವಿವಿಧ ಆರ್ಕಷಕ ಉತ್ಪನ್ನ ಲಭ್ಯ: ಗ್ರಾಮ್ಯ ಕಂಪನಿಯಿಂದ ವ್ಯಾನಿಟಿ ಬ್ಯಾಗ್, ನೆಲಹಾಸು, ಟೇಬಲ್ ಮ್ಯಾಟ್, ಕರ್ಟನ್ಸ್, ಪರ್ಸ್, ಫೈಲ್ಗಳು ಸೇರಿ ಹಲವು ಉಪಯುಕ್ತ ಬ್ಯಾಗ್ಗಳು, ಗೃಹ ಅಲಂಕಾರಿಕ ವಸ್ತು, ಬಾಳೆ ನಾರಿನಿಂದ ತಯಾರಿಸಿದ ನೂರಾರು ಕರಕುಶಲ ಉತ್ಪನ್ನಗಳು ಮೇಳದಲ್ಲಿ ಗಮನ ಸೆಳೆಯುತ್ತಿದೆ. ನಾರಿನಿಂದ ತಯಾರಿಸಿದ ವಸ್ತುಗಳನ್ನ ಕಂಡು ಫಿದಾ ಆದ ಕೃಷಿ ಇಲಾಖೆಯ ವಿಶೇಷ ಕಾರ್ಯದ ಕಾರ್ಯದರ್ಶಿಯಾಗಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮಳಿಗೆಯಲ್ಲಿ ಉತ್ಪನ್ನಗಳನ್ನ ಖರೀದಿಸಿದರು.
ನಾರಿನಿಂದ ಬ್ಯಾಗ್ ಹೇಗೆ ಸಿದ್ಧವಾಗುತ್ತೆ?: ಕೈ ಚೀಲ ತಯಾರಿಸಲು ಬೇಕಾಗುವ ಎಲ್ಲಾ ರೀತಿಯ ಬಾಳೆದಿಂಡು ಅನಗತ್ಯ. ಇದಕ್ಕೆ ರಸಬಾಳೆ, ಏಲಕ್ಕಿ ಬಾಳೆ, ನೇಂದ್ರ ಬಾಳೆ, ಕರಿಬಾಳೆ ದಿಂಡುಗಳಲ್ಲಿ ಗುಣಮಟ್ಟದ ನಾರಿಯಿದ್ದು, ಕರಕುಶಲ ವಸ್ತುಗಳು ಸಿದ್ಧಗೊಳಿಸಲು ಸೂಕ್ತವಾಗಿದೆ. ದಿಂಡಿನ ಮೇಲ್ಭಾಗದಲ್ಲಿರುವ ಪಟ್ಟಿಯನ್ನ ತೆಗೆದು ಒಳಗಿರುವ ತೆಳುವಾದ ನಾರನ್ನು ತೆಗೆಯುವ ಕೆಲಸ ಕೈಯಲ್ಲಿ ಮಾಡಲಾಗುತ್ತದೆ. ಬಳಿಕ ನೀರಿನಲ್ಲಿ ಒಣಗಿಸಿ ನೂಲು ತೆಗೆಯಲಾಗುತ್ತದೆ. ಇದಕ್ಕೂ ಮುನ್ನ ಬ್ಯಾಗಿಗೆ ಬೇಕಾದ ಪ್ಯಾಬ್ರಿಕ್ ಕೆಲಸ ಮಾಡಬೇಕಾಗುತ್ತದೆ. ಅಂತಿಮವಾಗಿ ಕರಕುಶಲತೆಯಿಂದ ಉತ್ಕೃಷ್ಟ ಹಾಗೂ ಗುಣಮಟ್ಟ ಉತ್ಪನ್ನಗಳನ್ನ ಸಿದ್ಧಪಡಿಸಲಾಗುತ್ತದೆ.
ಆಕರ್ಷಕ ಬ್ಯಾಗ್ ತಯಾರಿಸಲು ಮೂರು ದಿನ ಬೇಕಾಗುತ್ತದೆ. ಹಿರಿಯೂರು ಹಾಗೂ ಬೆಂಗಳೂರಿನ ರಾಜಾಜಿನಗರದಲ್ಲಿ ಬ್ಯಾಗ್ಗಳನ್ನು ತಯಾರಿಸಲಾಗುತ್ತದೆ. 2003ರವರೆಗೆ ಸ್ವಸಹಾಯ ಗುಂಪು ರಚಿಸಿ ಮಾರುಕಟ್ಟೆ ಮಾರಾಟ ಮಾಡಲಾಗುತಿತ್ತು. ಪಾಶ್ಚಿಮಾತ್ಯ ದೇಶಗಳಿಂದ ಅಪಾರ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸಂಘದ ಮಹಿಳೆಯರು ವಿದೇಶಿ ಗ್ರಾಹಕರ ಜೊತೆಗೆ ಸಂಪರ್ಕ ಕೊರತೆಯಿಂದ ಹಾಗೂ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆಯನ್ನ ವೃದ್ಧಿಸಲು 2003ರಲ್ಲಿ ಗ್ರಾಮ್ಯ ಕಂಪನಿ ತೆರೆದು ನಿರ್ವಹಣೆ ಮಾಡಲಾಗುತ್ತಿದೆ. ಕರಕುಶಲ ಉತ್ಪನ್ನಗಳ ಮಾರಾಟ ಗ್ರಾಮೀಣ ಮಹಿಳೆಯರಿಗೆ ಕೈ ಹಿಡಿದಿದ್ದು, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲರಾಗಲು ಕಾರಣವಾಗಿದೆ ಎಂದು ಈಟಿವಿ ಭಾರತ್ಗೆ ಶ್ರೀಕಾಂತ್ ಹೆಬ್ಬಾರ್ ತಿಳಿಸಿದರು.
ಇದನ್ನೂ ಓದಿ: ಸಾವಯವ ಮೇಳ: ಗಮನ ಸೆಳೆದ ಬುಡಕಟ್ಟು ಮಹಿಳೆಯರು ತಯಾರಿಸಿದ ನೇರಳೆ ಹಣ್ಣಿನ ಉತ್ಪನ್ನಗಳು