ಬೆಂಗಳೂರು: ವಾಣಿವಿಲಾಸ್ ಆಸ್ಪತ್ರೆಯಲ್ಲಿನ ಸಿಬ್ಬಂದಿ ಮಾಡಿದ ಯಡವಟ್ಟಿನಿಂದಾಗಿ ಎರಡು ದಿನದ ಕಂದಮ್ಮನನ್ನು ಖತರ್ನಾಕ್ ಮಹಿಳೆಯೊಬ್ಬಳು ಕದ್ದೊಯ್ದಿದ್ದಳು. ಈ ಬಗ್ಗೆ ಕ್ರಮ ಕೈಗೊಂಡ ವಿ.ವಿ. ಪುರಂ ಪೊಲೀಸರು ಚಾಣಾಕ್ಷತನದಿಂದ ಮಗುವನ್ನ ಪತ್ತೆ ಮಾಡಿ ಪೋಷಕರ ಮಡಿಲಿಗೆ ಸೇರಿಸಿದ್ದಾರೆ.
ನವೆಂಬರ್ 9ರಂದು ವಿಜಿನಾಪುರದ ನಿವಾಸಿಯಾದ 27 ವರ್ಷದ ಆರ್ಶಿಯಾ, ಹೆರಿಗೆಗೆಂದು ವಾಣಿ ವಿಲಾಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಹೆಣ್ಣು ಮಗು ಜನಿಸಿತ್ತು. ಮಗುವಿನ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಇದಾದ ಬಳಿಕ ನವೆಂಬರ್ 11 ರಂದು ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆ, ಮಗುವನ್ನು ತಾಯಿ ಬಳಿ ಕರೆದುಕೊಂಡು ಹೋಗುವಂತೆ ಆಸ್ಪತ್ರೆಯಲ್ಲಿ ಅನೌನ್ಸ್ಮೆಂಟ್ ಮಾಡಿದ್ದಾರೆ. ಈ ಬಳಿಕ ಐಸಿಯುಗೆ ಭೇಟಿ ನೀಡಿದ ಮಹಿಳೆಯೊಬ್ಬಳು, ತಾನು ಮಗುವಿನ ಅಜ್ಜಿ, ಮಗುವನ್ನು ತಾಯಿ ಹತ್ತಿರ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ, ಹಸುಗೂಸನ್ನು ತೆಗೆದುಕೊಂಡು ಎಸ್ಕೇಪ್ ಆಗಿದ್ದಳು.
ಇನ್ನು ರಶೀದ್, ಆರ್ಶಿಯಾ ದಂಪತಿಗೆ ಮಗು ದೊರೆಯದ ಹಿನ್ನೆಲೆ, ಆಸ್ಪತ್ರೆಯವರನ್ನು ವಿಚಾರಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಅತಂಕಗೊಂಡ ಪೋಷಕರು ಠಾಣೆಗೆ ದೂರು ನೀಡಿದ್ದಾರೆ. ಐಸಿಯುವಿನಲ್ಲಿ ಸಿಬ್ಬಂದಿ ಇಲ್ಲದಿರುವಾಗ ಮಗುವನ್ನು ಅಪಹರಿಸಿರುವುದು ತಿಳಿದು ಬಂದಿದೆ.
ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದು, ಸದ್ಯ ಮಗು ಕಳ್ಳತನ ಪ್ರಕರಣ ಸುಖಾಂತ್ಯ ಕಂಡಿದೆ. ಬಂಧಿತ ಮಹಿಳೆ 80 ಸಾವಿರ ರೂಪಾಯಿಗೆ ಕುಮಾರಸ್ವಾಮಿ ಲೇಔಟ್ ನಲ್ಲಿ ಮಗು ಮಾರಾಟ ಮಾಡಿದ್ದಳು. ಸದ್ಯ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ವಿ.ವಿ. ಪುರಂ ಪೊಲೀಸರು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಾಗೆಯೇ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.