ಬೆಂಗಳೂರು: ಕೊರೊನಾ ವೈರಸ್ ಬಿಕ್ಕಟ್ಟಿನ ಅವಧಿಯಲ್ಲಿ ರೈತರು ಹಾಗೂ ಗ್ರಾಹಕರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿರುವ ವಂದೇ ಭಾರತಂ ಸ್ವಯಂಸೇವಾ ಸಂಸ್ಥೆ ನೆರವಿನಿಂದ ರೈತರು ಸುಮಾರು 1,500 ಟನ್ಗಳಿಗಿಂತ ಹೆಚ್ಚು ತರಕಾರಿ ಹಾಗೂ ಹಣ್ಣು ಮಾರಾಟ ಮಾಡಿದ್ದಾರೆ.
ಉತ್ತಮ ಫಸಲು ಬಂದಿದ್ದರೂ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಲಾಕ್‌ಡೌನ್ ಅಡ್ಡಿಯಾಗಿದ್ದರಿಂದ ರೈತರು ಸಂಕಷ್ಟದಲ್ಲಿದ್ದರು. ಈ ಸಮಸ್ಯೆ ಅರಿತ ವಂದೇ ಭಾರತಂ ಸಂಸ್ಥೆಯ ಸಂಸ್ಥಾಪಕ ಲೊಕೇಶ್ ಅವರ ನೇತೃತ್ವದ ತಂಡವು, ರೈತರು ಬೆಳೆದ ಬೆಳೆಯನ್ನು ನೇರವಾಗಿ ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲು ಹೆಲ್ಪ್‌ಲೈನ್ ಆರಂಭಿಸಿತು.
ಹೆಲ್ಪ್‌ಲೈನ್ ಆರಂಭವಾಗುತ್ತಿದ್ದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಬೆಳೆದ ಬೆಳೆಗಳ ಮಾಹಿತಿ ನೀಡಿದರು. ಸಂಪೂರ್ಣ ಮಾಹಿತಿ ಸಂಗ್ರಹಿಸಿದ ಸಂಸ್ಥೆಯ ಸದಸ್ಯರು ನಗರದ ಬೆಂಗಳೂರು ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಹಾಗೂ ನಾಗರಿಕ ವಸತಿ ಕ್ಷೇಮಾಭಿವೃದ್ಧಿ ಸಂಘಟನೆಯ ಪ್ರಮುಖರೊಂದಿಗೆ ಚರ್ಚಿಸಿ ನೇರವಾಗಿ ರೈತರು ಬೆಳೆದ ಬೆಳೆಗಳನ್ನು ಕೊಂಡುಕೊಳ್ಳುವಂತೆ ಮನವಿ ಮಾಡಿದ್ದರು. ಸಂಸ್ಥೆಯ ಉದ್ದೇಶ ಅರಿತ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಒಪ್ಪಿಗೆ ನೀಡಿತು.
ಕೋಲಾರ, ಬೆಂಗಳೂರ ಗ್ರಾಮಾಂತರ, ಶಿವಮೊಗ್ಗ, ಶಿರಸಿ, ಕಾರವಾರ, ಬನವಾಸಿ, ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಹೆಲ್ಪ್‌ಲೈನ್ ಮೂಲಕ ಸುಮಾರು 300 ಮಂದಿ ರೈತರು ತಮ್ಮ ಬೆಳೆಯನ್ನು ನೇರವಾಗಿ ಮನೆ ಬಾಗಿಲಿಗೆ ಹೋಗಿ ಮಾರಾಟ ಮಾಡಿದ್ದಾರೆ.
ರೈತರೇ ವರ್ತಕರಾದರು.. ಸಂಸ್ಥೆಯ ಸಹಾಯದಿಂದ ಬೆಲೆಯಿಲ್ಲದೆ ಕಂಗಾಲಾಗಿದ್ದ ರೈತರು ಉತ್ತಮ ಬೆಲೆ ಸಿಗುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ದಲ್ಲಾಳಿ ಹಾವಳಿಯಿಲ್ಲದೆ, ಯಾವುದೇ ರಾಸಾಯನಿಕ ಕಲಬೆರಕೆಯಿಲ್ಲದೆ ಗುಣಮಟ್ಟದ ತರಕಾರಿ ಹಾಗೂ ಹಣ್ಣುಗಳನ್ನು ನಗರದ ಜನತೆ ಮಾರಾಟ ಮಾಡಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ರಫ್ತು ಮಾಡಲು ಸಾಧ್ಯವಾಗಿರಲಿಲ್ಲ. ಈ ವೇಳೆ ಕೆಜಿಗೆ 10 ರೂಪಾಯಿನಂತೆ ಒಂದೇ ದಿನದಲ್ಲಿ ವಂದೇ ಭಾರತಂ ಸಂಸ್ಥೆ 250 ಟನ್‌ನಷ್ಟು ಅನಾನಸ್ ಖರೀದಿಸಿದೆ. ಈ ಮೂಲಕ ರೈತರ ನೆರವಿಗೆ ಬಂದಿರುವುದು ತಮಗೆ ಖುಷಿ ತಂದಿದೆ ಎಂದು ವಂದೇ ಭಾರತಂ ಸಂಸ್ಥಾಪಕ ಬಿ ಹೆಚ್ ಲೋಕೇಶ್ ಈಟಿವಿ ಭಾರತ್ಗೆ ಹೇಳಿದ್ದಾರೆ.