ಬೆಂಗಳೂರು : ವಾಲ್ಮೀಕಿ ಸಮಾಜದ ಉಗ್ರ ಹೋರಾಟಕ್ಕೆ ಕಡೆಗೂ ಸರ್ಕಾರ ಮಣಿದಿದೆ. ಪರಿಶಿಷ್ಟ ಪಂಗಡಕ್ಕೆ 17.5 ಶೇಕಡಾ ಮೀಸಲಾತಿ ನೀಡಲು ಸರ್ಕಾರ ಒಪ್ಪಿದೆ ಎಂದು ಡಿಸಿಎಂ ಪರಮೇಶ್ವರ್ ಭರವಸೆ ನೀಡಿದ್ದಾರೆ.
ಆದ್ರೆ ಡೆಡ್ ಲೈನ್ ಹೇಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದಾಗ ಕಡೆಗೂ ಎರಡು ತಿಂಗಳ ಒಳಗಾಗಿ ಮೀಸಲಾತಿ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಎರಡು ತಿಂಗಳ ಅವಧಿಯೊಳಗೆ ಮೀಸಲಾತಿ ನೀಡದಿದ್ದರೆ ರಾಜ್ಯ ಹೊತ್ತಿ ಉರಿಯಲಿದೆ ಎಂದು ವಾಲ್ಮೀಕಿ ಸಮಾಜದ ಪ್ರಸನ್ನಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ವಾಲ್ಮೀಕಿ ಸಮಾಜದವರು ಕಳೆದ ಹದಿನಾರು ದಿನಗಳಿಂದ ಪಾದಾಯಾತ್ರೆ ನಡೆಸಿ, ನಗರದಲ್ಲಿ ಇಂದು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಬರಬೇಕು, ಇಲ್ಲದಿದ್ದರೆ ಸಮಾಜದ ಎಲ್ಲಾ ಶಾಸಕರು ರಾಜೀನಾಮೆ ನೀಡುತ್ತಾರೆ. ರಾಜೀನಾಮೆ ನೀಡಿದರೆ ಕುಮಾರಸ್ವಾಮಿ ಅಲ್ಲ ಅವರಪ್ಪನೇ ಕೇಳುತ್ತಾರೆ ಎಂದು ಆಕ್ರೋಶಭರಿತರಾಗಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿದರು.
ಅಲ್ಲದೆ ಅಧಿಕಾರ ಉಳಿಸಿಕೊಳ್ಳಲು ಹೇಗೆ ಬೇಕಾದರೂ ನಾಟಕವಾಡುವ ಕುಮಾರಸ್ವಾಮಿ, ದಿನಾ ನಮ್ಮ ಕಾಂಗ್ರೆಸ್ ಶಾಸಕರಿಗೆ ಫೋನ್ ಮಾಡುತ್ತಾರೆ. ಶಾಸಕರಿಂದ ರಾಜೀನಾಮೆ ಕೊಡಿಸಿ ಸರ್ಕಾರ ಉರುಳಿಸುತ್ತೇವೆ. ನಾವ್ ಹೇಳಿದ್ರೆ ಕುಮಾರಸ್ವಾಮಿಯೇನು ಅವರಪ್ಪನೂ ಕೇಳ್ಬೇಕು ಎಂದು ಗುಡುಗಿದರು.
ಬಳಿಕ ಪ್ರತಿಭಟನಾ ಸ್ಥಳಕ್ಕೆ ಡಿಸಿಎಂ ಪರಮೇಶ್ವರ್, ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಹೆಚ್ ಆಂಜನೇಯ, ಸತೀಶ್ ಜಾರಕಿಹೊಳಿ ಆಗಮಿಸಿದರು.
ಈ ವೇಳೆ ಮಾತನಾಡಿದ ಡಿಸಿಎಂ, ಸಂವಿಧಾನದಲ್ಲಿ ಮೀಸಲಾತಿಯನ್ನ ಅಂಬೇಡ್ಕರ್ ಅವರು ನೀಡಿದ್ದಾರೆ. ಜನಸಂಖ್ಯೆಗೆ ಆಧಾರವಾಗಿ ಮೀಸಲಾತಿ ನೀಡಬೇಕೆಂದು ಹೇಳಿದ್ದಾರೆ. ರಾಜ್ಯದಲ್ಲಿ ಎಸ್ ಸಿ, ಎಸ್ಟಿ ಸಮುದಾಯ ಶೇಕಡಾ 24.1 ರಷ್ಟು ಇದ್ದಾರೆ. ಮೀಸಲಾತಿ ಕೇಳೋದ್ರಲ್ಲಿ ತಪ್ಪಿಲ್ಲ.
ಪಾದಯಾತ್ರೆ ಸಮಯದಲ್ಲೇ ನಾವು ಎಚ್ಚರ ವಹಿಸಿದ್ದೇವೆ. ವಾಲ್ಮೀಕಿ ಸಮುದಾಯಕ್ಕೆ ಸಂಬಂಧಪಟ್ಟ ಶಾಸಕರನ್ನು ಕರೆದು ಮುಖ್ಯಮಂತ್ರಿಗಳು ಚರ್ಚೆ ಮಾಡಿದ್ರು. ಒಂದು ಅವಕಾಶ ಮಾಡಿಕೊಡಿ ಅಂತಾ ಸಿಎಂ ಹೇಳಿದ್ದಾರೆ. ಆಯೋಗ ಅಥವಾ ಸಮಿತಿ ರಚಿಸಿ, ಮೀಸಲಾತಿ ನೀಡುವ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗುವುದು. ಮೂರು ತಿಂಗಳು ಸಮಯಾವಕಾಶ ನೀಡಿ ಎಂದರು. ಮೂರು ತಿಂಗಳು ಸಾಧ್ಯವಿಲ್ಲ, ಎರಡು ತಿಂಗಳು ಸಮಯ ನೀಡುತ್ತೇವೆ ಎಂದು ಪ್ರಸನ್ನಾನಂದ ಸ್ವಾಮೀಜಿ ಗಡುವು ನೀಡಿದರು.