ಬೆಂಗಳೂರು: ರಾಮಾಯಣವನ್ನು ಹಲವರು ಬರೆದಿದ್ದಾರೆ, ಆದರೆ ವಾಲ್ಮೀಕಿ ರಾಮಾಯಣಕ್ಕಿರುವ ಶ್ರೇಷ್ಠತೆಯೇ ಬೇರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ.
ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸರ್ಕಾರ ಇರಲಿ, ಇಲ್ಲದಿರಲಿ ವಾಲ್ಮೀಕಿ ಜಯಂತಿಯನ್ನು ಪ್ರತಿವರ್ಷ ಆಚರಿಸಿಕೊಂಡು ಬಂದಿದ್ದೇವೆ. ಸಮಾಜದ ಮುಖಂಡರನ್ನು ಒಗ್ಗೂಡಿಸಿ ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದ್ದೇವೆ ಎಂದರು.
ಜೆಡಿಎಸ್ ಮುಖಂಡ ನಾಗರಾಜ್ ನಾಯಕ ಮಾತನಾಡಿ, ಸಮುದಾಯಕ್ಕೆ ನಿಜವಾದ ಗೌರವ ಗೌಡರಿಂದ ಸಂದಿದೆ. ವಾಲ್ಮೀಕಿ ಸಮುದಾಯ ಇಂದು ರಾಜ್ಯದಲ್ಲಿ ಶಕ್ತಿ ಹೊಂದಿದ್ದರೆ ಅದಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಾರಣ. ರಾಮಾಯಣದ ನಿಜವಾದ ಶಕ್ತಿ ವಾಲ್ಮೀಕಿ. ಬಿಜೆಪಿ ಇದರ ಲಾಭ ಪಡೆಯಲು ಮುಂದಾಗಿದೆ. ಇಂದು ವಾಲ್ಮೀಕಿ ಜನಾಂಗಕ್ಕಾಗುತ್ತಿರುವ ಅನ್ಯಾಯ, ನಷ್ಟ ಹಾಗು ಸಮುದಾಯ ಒಡೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ. ಸಮುದಾಯಕ್ಕೆ ಶೇ 7.5 ರಷ್ಟು ಮೀಸಲಾತಿ ನಮಗೆ ಸಿಗಬೇಕಾದ ಸಂದರ್ಭದಲ್ಲಿ ಕೈ ತಪ್ಪಿದೆ. ನಮಗೆ ನ್ಯಾಯ ಸಿಗಬೇಕಾದರೆ ನಮ್ಮ ಸಮುದಾಯವನ್ನು ಎಸ್ಟಿ ಸಮುದಾಯಕ್ಕೆ ಸೇರಿಸಲು ದೇವೇಗೌಡರಿಂದ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಎ.ಟಿ. ರಾಮಸ್ವಾಮಿ, ಜೆಡಿಎಸ್ ನಗರ ಘಟಕ ಅಧ್ಯಕ್ಷ ಆರ್. ಪ್ರಕಾಶ್, ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್, ಕಾರ್ಯಾಧ್ಯಕ್ಷ ನಾರಾಯಣ ಸ್ವಾಮಿ, ಮಾಜಿ ಉಪಮಹಾಪೌರ ಭದ್ರೇಗೌಡ ಹಾಜರಿದ್ದರು.