ಬೆಂಗಳೂರು: ರಾಜ್ಯದಲ್ಲಿ ವಿವಿಧ ಸಮುದಾಯಗಳ ಮೀಸಲಾತಿ ಹೋರಾಟ ತೀವ್ರಗೊಂಡಿರುವ ನಡುವೆ ವಾಲ್ಮೀಕಿ ಸಮುದಾಯದ ನಿಯೋಗವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳ ಕುರಿತು ಮಾತುಕತೆ ನಡೆಸಿತು.
ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ವಿಚಾರ ಸಂಬಂಧ ವಾಲ್ಮೀಕಿ ಸಮುದಾಯದ ಶಾಸಕರು ಸಿಎಂ ಬಿ.ಎಸ್. ಯಡಿಯೂರಪ್ಪ ಜೊತೆ ಸಮಾಲೋಚನೆ ನಡೆಸಿದರು. ಸಿಎಂ ಅಧಿಕೃತ ನಿವಾಸ ಕಾವೇರಿಗೆ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಶಾಸಕ ರಾಜುಗೌಡ ಸೇರಿದಂತೆ ಹಲವರು ಆಗಮಿಸಿದರು. ಸಿಎಂ ಜೊತೆ ಉಪಹಾರ ಕೂಟದೊಂದಿಗೆ ಸಭೆ ನಡೆಸಿದರು. ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಸಂಬಂಧ ಚರ್ಚಿಸಿದರು.
ಸಭೆ ನಂತರ ಮಾತನಾಡಿದ ಶಾಸಕ ರಾಜುಗೌಡ, ವಾಲ್ಮೀಕ ಶಾಸಕರು, ಸಂಸದರು, ಮುಖಂಡರು ಸಿಎಂ ಯಡಿಯೂರಪ್ಪ ಜೊತೆ ಉಪಹಾರ ಸಭೆ ಮಾಡಿದ್ದೇವೆ. ಹಲವು ವಿಚಾರ ಕುರಿತು ಚರ್ಚಿಸಿದ್ದೇವೆ. ಈಗಾಗಲೇ ಮೀಸಲಾತಿ ಕುರಿತು ಕಾನೂನು ತಜ್ಞರೊಂದಿಗೆ ಮಾತನಾಡಲಾಗಿದೆ. ಇವತ್ತಿನ ಸಭೆ ಆಶಾದಾಯಕವಾಗಿ ಕಾಣುತ್ತಿದೆ. ಲೀಗಲ್ ಒಪಿನಿಯನ್ ಪಡೆದು, ನ್ಯಾಯಬದ್ಧವಾಗಿ ನಮಗೆ ಮೀಸಲಾತಿ ಹೆಚ್ಚಳ ಸೌಲಭ್ಯ ಒದಗಿಸೋದಾಗಿ ಸಿಎಂ ಹೇಳಿದ್ದಾರೆ ಎಂದರು.
ಇವತ್ತಿನ ಕ್ಯಾಬಿನೆಟ್‌ನಲ್ಲಿ ಮೀಸಲಾತಿ ಕುರಿತು ಚರ್ಚೆ ಆಗಲ್ಲ, ಲೀಗಲ್ ಒಪಿನಿಯನ್ ಪಡೆಯೋದಾಗಿ ಅಷ್ಟೇ ಸಿಎಂ ಹೇಳಿದ್ದಾರೆ. ಮೀಸಲಾತಿಗಾಗಿ ಎಲ್ಲರೂ ಪಟ್ಟು ಹಿಡಿದಿದ್ದೇವೆ. ನಮಗೆ ನ್ಯಾಯಬದ್ಧವಾಗಿ ಮೀಸಲಾತಿ ಸಿಗಬೇಕಿದೆ. ಇಲ್ಲವೇ ಶೇ. 50ರಷ್ಟು ಎಸ್ಸಿ ಎಸ್ಟಿ, ಇಲ್ಲ ಎಲ್ಲವೂ ಜನರಲ್ ಮಾಡುವಂತೆ ಒತ್ತಾಯ ಮಾಡಿದ್ದೇವೆ ಎಂದು ತಿಳಿಸಿದರು.
ಪ್ರಥಮವಾಗಿ ಆರಂಭವಾಗಿದ್ದೇ ವಾಲ್ಮೀಕಿ ಜನಾಂಗದ ಹೋರಾಟ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ನಾವು ಹೋರಾಟ ಆರಂಭಿಸಿದ್ದೆವು. ಯಡಿಯೂರಪ್ಪ ಸಿಎಂ ಆಗಿದ್ದಾರೆ ಅನ್ನೋ ಕಾರಣಕ್ಕೆ ಕೆಲವರು ಈಗ ಹೋರಾಟ ಮಾಡುತ್ತಿದ್ದಾರೆ. ನಮ್ಮದು ನ್ಯಾಯಯುತವಾದ ಹೋರಾಟ. ಸಿಎಂ ಜೊತೆ ಕುಳಿತು ಎಲ್ಲರೂ ಚರ್ಚೆ ಮಾಡಲಿ. ಕಾಂಗ್ರೆಸ್ ಪಕ್ಷದ ಶಾಸಕನಾಗಿ ಮಾತನಾಡಿದರೆ ಎಲ್ಲವೂ ಸರಿ. ಆದರೆ ಬಿಜೆಪಿ ಶಾಸಕನಾಗಿ ಮಾತನಾಡಿದರೆ ಸಂವಿಧಾನವೇ ಬದಲು ಅಂತಾರೆ ಎಂದರು.
ನಾನು ಮೂರು ಬಾರಿ ಶಾಸಕ, ನನ್ನ ಮಗನಿಗೆ ಯಾಕೆ ಮೀಸಲಾತಿ ಬೇಕು?. ಐಪಿಎಸ್, ಐಎಎಸ್ ಆದವರ ಮಕ್ಕಳು ಮತ್ತೆ ಅದೇ ಹುದ್ದೆಗೆ ಸೇರುತ್ತಿದ್ದಾರೆ. ಬಡ ರೈತರ ಮಕ್ಕಳಿಗೂ ಮೀಸಲಾತಿ ಸಿಗಬೇಕು. ಈ ಹಿಂದೆ ಏಮ್ಸ್, ಐಐಟಿ ಎರಡನ್ನೂ ಬಿಟ್ಟುಕೊಟ್ಟಿದ್ದೇವೆ. ಈ ಬಾರಿಯಾದರೂ ಕಲ್ಯಾಣ ಕರ್ನಾಟಕಕ್ಕೆ ಏಮ್ಸ್ ಕೊಡುವಂತೆ ಶಾಸಕರು, ಸಂಸದರು ಮನವಿ ಕೊಡುತ್ತೇವೆ ಎಂದು ಹೇಳಿದರು.