ಬೆಂಗಳೂರು : ನಾಡಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ ಹಿನ್ನೆಲೆ ನಗರದ ಎಲ್ಲಾ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ದ್ವಾರ ನಿರ್ಮಾಣ ಮಾಡಲಾಗಿದೆ.
ವೈಕುಂಠ ದ್ವಾರ ಪ್ರವೇಶ ಮಾಡಿದ್ರೆ ಸ್ವರ್ಗ ಪ್ರಾಪ್ತಿ ಆಗುತ್ತೆ ಅನ್ನೋ ನಂಬಿಕೆ ಹಿನ್ನೆಲೆ ಭಕ್ತಾದಿಗಳು ಬಹಳಷ್ಟು ಆಗಮಿಸುವ ಸಾಧ್ಯತೆ ಇದೆ. ಕೊರೊನಾ ಭೀತಿ ಕಾರಣ ಕೆಲ ದೇವಸ್ಥಾನಗಳಲ್ಲಿ ಪ್ರವೇಶ ನಿಷೇಧವಿದ್ದು, ವೈಯಾಲಿಕಾವಲ್ ಟಿಟಿಡಿ ದೇವಸ್ಥಾನದಲ್ಲಿ ಮಾತ್ರ ಭಕ್ತರಿಗೆ ಪ್ರವೇಶ ನೀಡಲಾಗಿದೆ.
ಇಂದಿನಿಂದ ಜನವರಿ 3ರವರೆಗೆ ವೈಕುಂಠ ಏಕಾದಶಿ ದರ್ಶನ ಇದ್ದು, ತಿರುಪತಿಯಲ್ಲಿ 10 ದಿನಗಳ ಕಾಲ ವೈಕುಂಠ ಏಕಾದಶಿ ಕಾರ್ಯಕ್ರಮ ನಡೆಯಲಿದೆ. ಅದೇ ಮಾದರಿಯಲ್ಲಿ ಟಿಟಿಡಿಯಲ್ಲೂ 10 ದಿನಗಳ ಕಾಲ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಿದ್ದು, ದೇವಸ್ಥಾನದಲ್ಲಿ 10 ದಿನಗಳ ಕಾಲ ವೈಕುಂಠ ದ್ವಾರ ತೆರೆದಿರುತ್ತೆ.
ಗರ್ಭಿಣಿಯರು, ಅಂಗವಿಕಲರು, 70 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ವಿಶೇಷ ವಿಐಪಿ ಪಾಸ್ ವಿತರಣೆ ಇದೆ. ಭದ್ರತೆಗಾಗಿ 150 ಪೊಲೀಸರ ಆಯೋಜನೆ ಮಾಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.