ಬೆಂಗಳೂರು: ಕೇಂದ್ರ ನಾಗರಿಕ ಸೇವಾ ಆಯೋಗ 2021ರ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದೆ. ಯುಪಿಎಸ್ಸಿ ಪರೀಕ್ಷೆಯಲ್ಲಿ ಕರ್ನಾಟಕದ ಅಭ್ಯರ್ಥಿಗಳು ಅಬ್ಬರ ಜೋರಾಗಿದ್ದು, ಬೆಂಗಳೂರಿನ ಇನ್ಸೈಟ್ಸ್ ಐಎಎಸ್ ಅಕಾಡೆಮಿಯ 20 ಮಂದಿ ಟಾಪರ್ಸ್ ಆಗಿದ್ದರೆ, ಉಳಿದಂತೆ ಅಕ್ಕ ಐಎಎಸ್ ಅಕಾಡೆಮಿಯ 6 ಮಂದಿ ಪಾಸ್ ಆಗಿದ್ದಾರೆ. ಒಟ್ಟಾರೆ ಕರ್ನಾಟಕದಿಂದ 27 ಅಭ್ಯರ್ಥಿಗಳು ಈ ಸಲದ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಒಂದೇ ಪ್ರಯತ್ನದಲ್ಲೇ ಪರೀಕ್ಷೆ ಪಾಸ್ ಮಾಡಿದ ಪ್ರಶಾಂತ್: ಶಿವಮೊಗ್ಗದ ಪ್ರಶಾಂತ್ ಕುಮಾರ್ ಬಿಒ ಎಂಬ ಅಭ್ಯರ್ಥಿ ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪಾಸ್ ಮಾಡಿದ್ದಾರೆ. ಯಾವುದೇ ಕೋಚಿಂಗ್ ಸೆಂಟರ್ಗೆ ಹೋಗದೇ 641ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಪ್ರಶಾಂತ್ ಕುಮಾರ್ ತಂದೆ ಓಂಕಾರಪ್ಪ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಷಯ ಉಪನ್ಯಾಸಕರಾಗಿದ್ದು,ತಾಯಿ ರೇಖಾ ಜೆ, ಗೃಹಿಣಿಯಾಗಿದ್ದಾರೆ. ಪ್ರಶಾಂತ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಎಂಬಿಬಿಎಸ್ ಪದವಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: UPSC ಟಾಪರ್ ಶೃತಿ ಶರ್ಮಾ ಸಂದರ್ಶನ.. ETV ಭಾರತ ಜೊತೆ ಸಾಧನೆಯ ಹಾದಿ ಬಗ್ಗೆ ಮಾತು
ಸಾರ್ವಜನಿಕರ ವಲಯದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಮತ್ತು ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಬಯಕೆಯನ್ನ ಹೊಂದಿದ್ದು, ಹೀಗಾಗಿ ಯುಪಿಎಸ್ಸಿ ಆಯ್ಕೆ ಮಾಡಿಕೊಂಡಿರುವುದಾಗಿ ಪ್ರಶಾಂತ್ ತಿಳಿಸಿದ್ದಾರೆ. ಇನ್ನೂ ಗಂಗಾವತಿಯ ದಂತ ವೈದ್ಯೆ ಅಪೂರ್ವ ಬಾಸೂರು 191ನೇ ರ್‍ಯಾಂಕ್ ಗಳಿಸಿದ್ದು, ದಾವಣಗೆರೆಯ ಅವಿನಾಶ್ 31ನೇ ಸ್ಥಾನ ಪಡೆದಿದ್ದಾರೆ.
ಇನ್ನೂ ದೆಹಲಿಯ ಜಾಮಿಯಾ ಮಿಲಿಯಾ ಕೋಚಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಂಡಿರುವ ಒಟ್ಟು 23 ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದಾರೆ.